ಬೆಂಗಳೂರು,ಜೂ.8– ಸಿವಿಲ್ ಆಸ್ತಿಯ ಸಂಬಂಧದ ಪ್ರಕರಣಗಳಲ್ಲಿ ಸಕ್ಷಮ ಇಲಾಖಾ ಮುಖ್ಯಸ್ಥರಿಂದ ಪೂರ್ವಾನುಮತಿಯನ್ನು ಪಡೆದು, ಕಂದಾಯ ಇಲಾಖೆಯ ಅಧಿಕಾರಿಗಳು, ನೌಕರರುಗಳಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡುವಂತೆ ಪೊಲೀಸರರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ)ರು ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ಸಿವಿಲ್ ಆಸ್ತಿಯ ಸಂಬಂಧ ದಾಖಲಾಗುವ ಪ್ರಕರಣಗಳಲ್ಲಿ ಸಕ್ಷಮ ಇಲಾಖಾ ಮುಖ್ಯಸ್ಥರ ಪೂರ್ವಾನುಮತಿಯನ್ನು ಪಡೆದು, ಕಂದಾಯ ಇಲಾಖೆಯ ಅಧಿಕಾರಿಗಳು, ನೌಕರರುಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲು ತಮ್ಮ ಅಧೀನದ ಅಧಿಕಾರಿ, ಪೊಲೀಸ್ ಠಾಣಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದಾಖಲಾಗುವಂತ ಸಿವಿಲ್ ಆಸ್ತಿ ಪ್ರಕರಣ ಸಂಬಂಧ ಅನಗತ್ಯವಾಗಿ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತಿತ್ತು. ಇದರಿಂದ ಕಿರಿಕಿರಿ ಉಂಟಾಗುತ್ತಿದ್ದು, ಕೆಲಸ ಮಾಡೋದಕ್ಕೂ ತೊಂದರೆ ಆಗುತ್ತಿದೆ ಎಂಬುದಾಗಿ ಸರ್ಕಾರದ ಗಮನಕ್ಕೆ ಕಂದಾಯ ಇಲಾಖೆ ತಂದಿತ್ತು. ಈ ಹಿನ್ನಲೆಯಲ್ಲಿಯೇ ಈಗ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದ ನಂತ್ರವೇ ನೋಟಿಸ್ ಜಾರಿಗೊಳಿಸುವಂತೆ ಪೊಲೀಸ್ ಇಲಾಖೆಯು, ಪೊಲೀಸ್ ಕಮೀಷನರ್, ಬೆಂಗಳೂರು , ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು , ಬೆಳಗಾವಿ, ಕಲಬುರ್ಗಿ ನಗರದವರಿಗೆ ಸೂಚಿಸಿದೆ.
ಇದಷ್ಟೇ ಅಲ್ಲದೇ ಎಲ್ಲಾ ವಲಯ ಪೊಲೀಸ್ ಮಹಾ ನಿರೀಕ್ಷಕರುಗಳು, ಎಲ್ಲಾ ಘಟಕದ ಪೊಲೀಸ್ ಅಧೀಕ್ಷಕರು, ಕೆಜಿಎಫ್ ಮತ್ತು ರೈಲ್ವೆ ಸೇರಿದಂತೆ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೂ ಸೂಚಿಸಿದ್ದಾರೆ.
Previous Articleನಿಖಿಲ್ ಪುತ್ರನ ನಾಮಕರಣ
Next Article ಸಮುದ್ರದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!