ಬೆಂಗಳೂರು,ಸೆ.26-
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕೇಳಿ ಬಂದಿರುವ ನಿವೇಶನ ಹಂಚಿಕೆ ಅಕ್ರಮ ಆರೋಪದ ಬಗ್ಗೆ ಯಾವ ನಿಯಮಾವಳಿಗಳ ಆಧಾರದಲ್ಲಿ ತನಿಖೆ ನಡೆಸಬೇಕು ಎಂಬ ಜಿಜ್ಞಾಸೆ ಉಂಟಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿಗಳ ವಿರುದ್ಧ ಕ್ರಿಮಿನಲ್ ದಂಡ ಸಂಹಿತೆ(CRPC) ಅಡಿ ಪ್ರಕರಣ ದಾಖಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಸೂಚನೆ ನೀಡಿದೆ ಆದರೆ ಕೇಂದ್ರ ಸರ್ಕಾರ ಸಿ ಆರ್ ಪಿ ಸಿ ಬದಲಿಗೆ ಭಾರತೀಯ ನ್ಯಾಯ ಸಂಹಿತೆಯನ್ನು ಜಾರಿಗೆ ತಂದಿದೆ. ಅಲ್ಲದೆ ಇನ್ನು ಮುಂದೆ ಎಲ್ಲಾ ಪ್ರಕರಣಗಳನ್ನು ಸಿಆರ್ ಪಿಸಿ ಬದಲಾಗಿ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಅಧಿ ಸೂಚನೆ ಮೂಲಕ ತಿಳಿಸಿದೆ ಆದರೆ ಜನಪ್ರತಿನಿಧಿಗಳ ನ್ಯಾಯಾಲಯ ಈ ಪ್ರಕರಣ ಕುರಿತಂತೆ ಸಿ ಆರ್ ಪಿ ಸಿ ಅಡಿಯಲ್ಲಿ ತನಿಖೆಗೆ ಆದೇಶದಿದೆ ಇದು ತನಿಖಾ ಅಧಿಕಾರಿಗಳನ್ನು ಜಿಜ್ಞಾಸೆಯಲ್ಲಿ ಬೀಳುವಂತೆ ಮಾಡಿದೆ.
ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಪ್ರಕರಣವನ್ನು ಯಾವ ನಿಯಮಗಳ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಮತ್ತೊಮ್ಮೆ ನ್ಯಾಯಾಲಯದ ಅಭಿಪ್ರಾಯ ಕೇಳುವ ಕುರಿತಂತೆ ಚಿಂತನೆ ಆರಂಭಿಸಿದ್ದಾರೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಜನಪ್ರತಿನಿಧಿಗಳ ನ್ಯಾಯಾಲಯ ಸೂಚಿಸಿರುವಂತೆ ಸಿಆರ್‌ಪಿಸಿ ಅಡಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಜಾರಿಯಲ್ಲಿರುವ ಬಿಎನ್‌ಎಸ್‌ಎಸ್ ನಿಯಮಗಳ ಅಡಿ ಪ್ರಕರಣ ದಾಖಲಿಸಲು ಆದೇಶಿಸಿದ್ದರೆ ಸೂಕ್ತವಾಗುತ್ತಿತ್ತು ಎಂದು ಹೇಳಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಸಿಆರ್‌ಪಿಸಿ 156/3ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದರೆ ಈಗ ಸಿಆರ್‌ಪಿಸಿ ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳಿದರು.
ಬಿಎನ್‌ಎಸ್‌ಎಸ್ ನಿಯಮಗಳು 2024ರ ಜುಲೈ 1 ರಿಂದಲೂ ಚಾಲ್ತಿಯಲ್ಲಿದೆ. ಅದರ ಅಡಿ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅವಕಾಶವಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ಕುರಿತು ಚರ್ಚೆಗಳು ನಡೆಯುತ್ತಿವೆ. ಕಾನೂನು ತಜ್ಞರ ತಂಡ ಪರಿಶೀಲನೆ ನಡೆಸಿ ಯಾವ ರೀತಿಯ ವರದಿ ನೀಡಲಿದೆ ಎಂದು ಕಾಯುತ್ತಿದ್ದೇವೆ. ವರದಿಯ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ಸೇರಿ ಬೇರೆ ಬೇರೆ ಹಂತಗಳಲ್ಲಿ ಪ್ರಶ್ನಿಸಲು ಅವಕಾಶ ಇದೆ.ಹೈಕೋರ್ಟ್‌ನ ತೀರ್ಪಿನಿಂದ ನಮಗೆ ಸಮಾಧಾನವಾಗಿಲ್ಲ. ನಾವು ನೀಡಿದ ಸಾಕ್ಷ್ಯಗಳು, ಪುರಾವೆಗಳನ್ನು ತೀರ್ಪು ನೀಡುವ ವೇಳೆ ಪರಿಗಣಿಸಲಾಗಿಲ್ಲ. ಹೀಗಾಗಿ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದರು.
Previous Articleಸಿಎಂ ಗೆ ರಾಹುಲ್ ಗಾಂಧಿ ಕೊಟ್ಟ ಸೂಚನೆ
Next Article BJP ಬೇಗುದಿ ನಿಲ್ಲೋದು ಯಾವಾಗ.