ಬೆಂಗಳೂರು,
ಅಧಿಕಾರ ಹಸ್ತಾಂತರ ವಿಚಾರದ ಕುರಿತಾಗಿ ರಾಜ್ಯ ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಲು ತಕ್ಷಣವೇ ಹೈಕಮಾಂಡ್ ಮಧ್ಯ ಪ್ರವೇಶಿಸಿ ಎಲ್ಲವನ್ನು ಇತ್ಯರ್ಥ ಪಡಿಸಬೇಕು ಎಂದು
ಆಗ್ರಹಿಸಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ತೀರ್ಮಾನಿಸಿದ್ದಾರೆ.
ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬದ ನೆಪದಲ್ಲಿ ಕಳೆದ ರಾತ್ರಿ ಭೋಜನ ಕೂಟ ನಡೆಸಿದ ಡಿಕೆ ಶಿವಕುಮಾರ್ ಬಣದ 20ಕ್ಕೂ ಹೆಚ್ಚು ಶಾಸಕರು ಸದ್ಯದಲ್ಲಿಯೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ
ನಾಯಕತ್ವ ಬದಲಾವಣೆ ಕುರಿತಂತೆ ಹೈಕಮಾಂಡ್ ಯಾವುದಾದರೂ ತೀರ್ಮಾನ ಕೈಗೊಳ್ಳದಿದ್ದರೆ ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಹಾನಿಯಾಗಲಿದೆ ಎಂದು ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಬೇಕು ಎಂದು ಕೋರಲು ತೀರ್ಮಾನಿಸಿದ್ದಾರೆ.
ಸಚಿವರಾದ ಡಿ. ಸುಧಾಕರ್, ಮಾಕಾಂಳ ವೈದ್ಯ ಸಹ ಭಾಗಿಯಾಗಿದ್ದರು. ಇವರ ಜತೆಗೆ ಶಾಸಕರುಗಳಾದ ಸಿ.ಪಿ. ಯೋಗೀಶ್ವರ್, ಉದಯಗೌಡ ಕದಲೂರು, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ಬಿ.ಶಿವಣ್ಣ,ಡಾ. ರಂಗನಾಥ್, ಟಿ.ಬಿ.ಜಯಚಂದ್ರ, ನಯನ ಮೋಟಮ್ಮ, ಬಸವರಾಜು ಶಿವಗಂಗಾ, ಪ್ರಕಾಶ್ ಕೋಳಿವಾಡ, ಗಣೇಶ್ ಹುಕ್ಕೇರಿ, ಶರತ್ ಬಚ್ಚೇಗೌಡ, ಮಂತರ್‌ಗೌಡ, ಹೊನ್ನಾಳಿ ಶಾಸಕ ಶಾಂತನಗೌಡ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.
ಸಭೆಯಲ್ಲಿ ಪ್ರಮುಖವಾಗಿ ಮಾತನಾಡಿದ ಬಾಲಕೃಷ್ಣ ಡಾ. ರಂಗನಾಥ್ ರವಿಕುಮಾರ್ ಗಣಿಗ ಮತ್ತು ನಯನ ಮೋಟಮ್ಮ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಡಿಕೆ ಶಿವಕುಮಾರ್ ಅವರು ಸಾಕಷ್ಟು ಶ್ರಮ ಪಟ್ಟಿದ್ದಾರೆ ಈ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಹೈಕಮಾಂಡ್ ನೀಡಬೇಕು ಆದರೆ ಇಲ್ಲಿಯವರೆಗೆ ತೀರ್ಮಾನ ಪ್ರಕಟಿಸದೆ ಮೀನಾ ಮೇಷ ಎಣಿಸುವ ಮೂಲಕ ಗೊಂದಲ ಸೃಷ್ಟಿಸುತ್ತಿದೆ ಎಂಬ ಆಳಲು ತೋಡಿಕೊಂಡಿದ್ದಾರೆ.
ಸರ್ಕಾರ ರಚನೆಯ ಸಮಯದಲ್ಲಿ ಆದ ಒಪ್ಪಂದದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಅಸ್ತಾಂತರ ಮಾಡಬೇಕು ಆದರೆ ಅವರು ಹೈಕಮಾಂಡ್ ನೆಪ ಹೇಳಿಕೊಂಡು ಅಧಿಕಾರ ಹಸ್ತಾಂತರಕ್ಕೆ ಮುಂದಾಗುತ್ತಿಲ್ಲ ಹೀಗಾಗಿ ನಮ್ಮ ತಾಳ್ಮೆಗೂ ಒಂದು ಮಿತಿ ಇದೆ ಅಗತ್ಯ ಬಿದ್ದರೆ ಎಲ್ಲರೂ ಸೇರಿ ಶಕ್ತಿ ಪ್ರದರ್ಶನ ಮಾಡೋಣ ಎಂದು ಹೇಳಿರುವುದಾಗಿ ಗೊತ್ತಾಗಿದೆ.
ಈ ನಡುವೆ ಸಭೆಯಲ್ಲಿ ಹಾಜರಿದ್ದ ರಾಜ್ಯಸಭೆಯ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್ ಮಾತನಾಡಿ ಈ ವಿಷಯದಲ್ಲಿ ಹೈಕಮಾಂಡ್ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ ನೀವುಗಳು ದುಡುಕಿ ಶಕ್ತಿ ಪ್ರದರ್ಶನದಂತಹ ಪ್ರಯತ್ನಗಳಿಗೆ ಮುಂದಾಗಬೇಡಿ ಡಿಕೆ ಶಿವಕುಮಾರ್ ಅವರಿಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಾವು ನಿಮ್ಮ ಜೊತೆ ಇದ್ದೇವೆ ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ ಬಹುತೇಕ ರಾಜ್ಯ ವಿಧಾನ ಮಂಡ್ಯದ ಬಜೆಟ್ ಅಧಿವೇಶನ ಮುಗಿದ ಕೂಡಲೇ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ಆಗಲಿದೆ ಎಂದು ವಿವರಿಸಿರುವುದಾಗಿ ತಿಳಿದು ಬಂದಿದೆ.
ಜಿ ಸಿ ಚಂದ್ರಶೇಖರ್ ಅವರ ಅಭಿಪ್ರಾಯಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರಾದರು ಹೈಕಮಾಂಡ್ ಕಳೆದ ಆರು ತಿಂಗಳಿನಿಂದ ಇದೇ ರೀತಿಯ ನೆಪಗಳನ್ನು ಹೇಳುತ್ತಾ ಬಂದಿದೆ ಈಗ ಬಜೆಟ್ ಅಧಿವೇಶನ ಆಗಲಿ ಎನ್ನುತ್ತಾರೆ ಆನಂತರ ಕೇರಳ ಚುನಾವಣೆ ಮುಗಿಯಲಿ ಎಂಬ ನೆಪ ಹುಡುಕುತ್ತಾರೆ ಹೀಗಾಗಿ ಈ ಗೊಂದಲ ಹೀಗೆ ಮುಂದುವರೆಯುತ್ತದೆ ಇದಕ್ಕೆ ಕೊನೆ ಹಾಡಲೇಬೇಕು ಹೀಗಾಗಿ ಎಲ್ಲರೂ ಒಟ್ಟಾಗಿ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಅಲ್ಲದೆ ರಾಹುಲ್ ಗಾಂಧಿ ಜೊತೆ ಭೇಟಿಗೆ ಸಮಯ ನಿಗದಿಪಡಿಸುವ ಜವಾಬ್ದಾರಿಯನ್ನು ಜಿಸಿ ಚಂದ್ರಶೇಖರ್ ಅವರಿಗೆ ನೀಡಲಾಗಿದೆ.

