ಬೆಂಗಳೂರು,ಫೆ.8- ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ಪಡೆಯಲು ಶೇಕಡ 40 ರಷ್ಟು ಕಮೀಷನ್ ಕೊಡಬೇಕು ಎಂದು ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಮೂಲಕ ಕೋಲಾಹಲ ಸೃಷ್ಟಿಸಿದ ಗುತ್ತಿಗೆದಾರರು ಇದೀಗ ಹಾಲಿ ಕಾಂಗ್ರೆಸ್ (Karnataka Congress) ನೇತೃತ್ವದ ಸರ್ಕಾರದ ವಿರುದ್ಧವೂ ಕಮೀಷನ್ ಆರೋಪ ಮಾಡಿದ್ದಾರೆ.
ಈ ಮೊದಲು ಗುತ್ತಿಗೆದಾರರಿಂದ ಶಾಸಕರೇ ನೇರವಾಗಿ ಹಣ ಕೇಳುತ್ತಿದ್ದರೂ ಇದೀಗ ಅಧಿಕಾರಿಗಳೆ ಹಣ ಕೆಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರದಲ್ಲಿ ಇದ್ದಂತಹ ಶೇ.40ರಷ್ಟು ಕಮಿಷನ್ ದಂಧೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರೆದಿದೆ.ಈಗ ಶಾಸಕರು ಕಮೀಷನ್ ಕೇಳುತ್ತಿಲ್ಲ ಅಧಿಕಾರಿಗಳು ಕೇಳುತ್ತಿದ್ದಾರೆ ಅಷ್ಟೇ ವ್ಯತ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೇಗಾದರೂ ಮಾಡಿ ನಮಗೆ ಗುತ್ತಿಗೆ ನೀಡಿ ಎಂದು ಅಧಿಕಾರಿಗಳನ್ನು ಕೇಳಿದರೆ ಅವರು ಹಣ ಕೇಳುತ್ತಿದ್ದಾರೆ. ಈ ಹಿಂದೆ ನಾವು ಪೂರ್ಣಗೊಳಿಸಿರುವ ಕಾಮಗಾರಿ ಮುಗಿದು ಎರಡು ವರ್ಷ ಕಳೆದರೂ ಬಾಕಿ ಬಿಲ್ ಬಿಡುಗಡೆಯಾಗಿಲ್ಲ. ಈಗಲೂ ಶೇ.40 ರಷ್ಟು ಕಮಿಷನ್ ದಂಧೆ ಮುಂದುವರೆದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಮೀಷನ್ ದಂಧೆಯ ಮೂಲ ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಪ್ಯಾಕೇಜ್ ಟೆಂಡರ್.ಇದೊಂದು ಅನಾವಶ್ಯಕ ಪದ್ದತಿ.ಸರ್ಕಾರ ಈ ಕೂಡಲೇ ಪ್ಯಾಕೇಜ್ ಟೆಂಡರ್ ಗಳನ್ನ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ಯಾಕೇಜ್ ಟೆಂಡರ್ ಕುರಿತಂತೆ ನಾವು ಹಲವು ಭಾರಿ ಸಿಎಂ ಅವರನ್ನ ಭೇಟಿ ಮಾಡಿದ್ದೇವೆ ಜೊತೆಗೆ ಹತ್ತಾರು ಪತ್ರ ಬರೆದು ಒತ್ತಾಯಿಸಿದ್ದೇವೆ. ಆದರೆ, ಅವರು ನಮ್ಮ ಮಾತನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ,ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಪ್ಯಾಕೇಜ್ ಟೆಂಡರ್ ಆಹ್ವಾನ ಮಾಡಲಾಗಿದೆ ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮೋಸವಾಗುತ್ತದೆ ಅಲ್ಲದೆ, ಹೊರ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗುತ್ತಿದೆ. ಹೀಗಾಗಿ ಈ ಕೂಡಲೇ ಪ್ಯಾಕೇಜ್ ಟೆಂಡರ್ ರದ್ದುಪಡಿಸಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಟೆಂಡರ್ ಮೂಲಕ ಹಂಚಿಕೆ ಮಾಡಿದ್ರೆ ಎಲ್ಲರಿಗೂ ನ್ಯಾಯ ಸಿಗುತ್ತೆ ಎಂದು ಹೇಳಿದರು