ಬೆಂಗಳೂರು, ಸೆ.11 – ರಾಜ್ಯ ಕಾಂಗ್ರೆಸ್ ವಿದ್ಯಮಾನಗಳು ತೀವ್ರ ಕುತೂಹಲಕರ ಘಟ್ಟ ತಲುಪಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹರಿಪ್ರಸಾದ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದ ಹಲವರು ಇದೀಗ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ದೂರು ನೀಡಲು ಸಿದ್ದತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದರ ಬೆನ್ನಲ್ಲೇ ಹೈಕಮಾಂಡ್ ನಾಯಕರು ಹರಿಪ್ರಸಾದ್ ಅವರನ್ನು ಸಂಪರ್ಕಿಸಿ ಇನ್ನು ಮುಂದೆ ಈ ಕುರಿತಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ತಾಕೀತು ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಪರೋಕ್ಷ ವಾಗ್ದಾಳಿ ನಡೆಸಿರುವ ಬಿ ಕೆ ಹರಿಪ್ರಸಾದ್ ಅವರ ನಡೆ ಬಗ್ಗೆ ಪಕ್ಷವು ಗಮನಿಸುತ್ತಿದ್ದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಹರಿಪ್ರಸಾದ್ ಪಕ್ಷದ ಹಿರಿಯ ನಾಯಕರು. ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ತಿನಲ್ಲಿ ಪಕ್ಷದ ನಾಯಕರಾಗಿ ಕೆಲಸ ಮಾಡಿರುವವರು. ಅವರಿಂದ ಇಂತಹ ಮಾತು ಬರಬಾರದಿತ್ತು. ಅವರ ಮಾತುಗಳನ್ನು ಕೇಳಿಸಿಕೊಂಡು ಪಕ್ಷದ ರಾಷ್ಟ್ರೀಯ ನಾಯಕರು ಸುಮ್ಮನೆ ಕೂರುವುದಿಲ್ಲ’ ಎಂದರು.
ಹರಿಪ್ರಸಾದ್ ಅವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ, ವೇಣುಗೋಪಾಲ್ ಎಲ್ಲರೂ ಆತ್ಮೀಯರು. ಹೀಗಿರುವಾಗ ಅವರು ಎಲ್ಲ ವಿಚಾರಗಳನ್ನೂ ಪಕ್ಷದ ಒಳಗೇ ಮಾತನಾಡಬೇಕಿತ್ತು. ಆದರೆ ಅವರು ಬೀದಿಗೆ ಹೋಗಿದ್ದಾರೆ. ಇದು ಸರಿಯಲ್ಲ. ಇದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಈ ನಡುವೆ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್ ರಾಜಕೀಯವಾಗಿ ತಮ್ಮ ವಿರುದ್ಧ ಮಾತನಾಡುವವರ ಮೇಲೆ ಕೆಲವು ಹಗರಣಗಳಿವೆ, ಮೊದಲು ಅವರು ಅದರಿಂದ ಹೊರ ಬರಲಿ ಎಂದು ಹೇಳಿದರು. ಹಗರಣದಲ್ಲಿ ಭಾಗಿಯಾದವರ ಮೇಲೆ ಕೆಲ ಹಗರಣಗಳಿವೆ. ಅವುಗಳಿಂದ ಪಾರಾಗಿ ಬರುತ್ತೇವೆ ಎಂಬ ವಿಶ್ವಾಸವೂ ಅವರಿಗೆ ಇದ್ದಂತಿದೆ ಎಂದರು.
ಕಾಂಗ್ರೆಸ್‍ನಲ್ಲಿ ಕಿತ್ತಾಟ ಇಲ್ಲ. ಪ್ರಜಾಪ್ರಭುತ್ವ ಇದೆ. ನಮಗೆ ಚರ್ಚೆ ಮಾಡಲು ಮುಕ್ತ ವಾತಾವರಣ ಇದೆ. ನಾನು ಬಿಜೆಪಿಯಂತೆ ನಾಗ್ಪುರದಿಂದ ಆದೇಶ ಪಡೆದುಕೊಂಡು ಮಾತನಾಡುವುದಿಲ್ಲ ಎಂದರು.ನನ್ನ ವಿರುದ್ಧ ಹೈಕಮಾಂಡ್ ಸೇರಿ ಎಲ್ಲರಿಗೂ ದೂರು ಕೊಡಲಿ, ಸಂತೋಷ. ದೂರು ಕೊಡುವವರು ಮೊದಲು ತಾವೇನು ಎಂದು ತಿಳಿದುಕೊಳ್ಳಲಿ ಎಂದು ಹೇಳಿದರು