ನವದೆಹಲಿ, ಫೆ.7: ಬರ ಪರಿಹಾರಕ್ಕೆ ನೆರವು ಹಾಗೂ ಅನುದಾನ ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.
ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಸಂಸದರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರೆ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ಧರಣಿ ನಡೆಸಿ ವಿಧಾನಸೌಧಕ್ಕೆ ಬೀಗ ಜಡಿಯಲು ಮುಂದಾದರು.
ಶ್ವೇತ ಪತ್ರ :
ದೆಹಲಿಯ ಜಂತರ್ ಮಂತರ್ ನಲ್ಲಿ ಮಂತ್ರಿಗಳು ಮತ್ತು ಶಾಸಕರೊಂದಿಗೆ ಪ್ರತಿಭಟನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ಪ್ರಹಾರ ನಡೆಸಿದರು.
ಬಿಜೆಪಿಯ ಬೇಡಿಕೆಯಂತೆ ಕೇಂದ್ರದಿಂದ ರಾಜ್ಯಕ್ಕಾಗಿರುವ ಆರ್ಥಿಕ ತಾರತಮ್ಯದ ಕುರಿತು ರಾಜ್ಯ ಬಜೆಟ್ ಮಂಡನೆ ವೇಳೆ ಶ್ವೇತ ಪತ್ರ ಹೊರಡಿಸುವುದಾಗಿ ಪ್ರಕಟಿಸಿದರು.
ರಾಜ್ಯಸರ್ಕಾರದ ಆಯವ್ಯಯವೇ ಶ್ವೇತಪತ್ರವಿದ್ದಂತೆ. ಆದರೂ ಬಿಜೆಪಿಯವರು ಪ್ರತ್ಯೇಕವಾದ ಮಾಹಿತಿ ಕೇಳುತ್ತಿದ್ದಾರೆ. ಅವರ ಬೇಡಿಕೆಗನುಗುಣವಾಗಿ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಹೇಳಿದರು.
2017-18 ರಲ್ಲಿದ್ದ ಬಜೆಟ್ ಗಾತ್ರ 2024-25 ರ ವೇಳೆಗೆ ದ್ವಿಗುಣಗೊಂಡಿದೆ. ಹೀಗಾಗಿ ತೆರಿಗೆ ಹಾಗೂ ಅನುದಾನದ ಹಂಚಿಕೆಯೂ ಹೆಚ್ಚಾಗಬೇಕಿತ್ತು. 14 ನೇ ಹಣಕಾಸು ಆಯೋಗದಲ್ಲಿದ್ದಷ್ಟೇ ಪ್ರಮಾಣದ ತೆರಿಗೆ ಹಂಚಿಕೆಯಾಗಿದೆ.
ಇದರಿಂದ ರಾಜ್ಯಕ್ಕೆ 1.87 ಲಕ್ಷ ಕೋಟಿ ರೂ. ನಷ್ಟವಾಗಿದೆ. 14 ನೇ ಹಣಕಾಸು ಆಯೋಗದ ಮಾನದಂಡಗಳನ್ನೇ ಅನುಸರಿಸಿದರು. 14 ನೇ ಹಣಕಾಸು ಆಯೋಗದ ವೇಳೆಗೆ 62,098 ಕೋಟಿ ರೂ. ತೆರಿಗೆ ಪಾಲು ಹೆಚ್ಚಾಗಬೇಕಿತ್ತು. ಆದರೆ ಮಲತಾಯಿ ಧೋರಣೆಯಿಂದಾಗಿ ಭಾರಿ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಕಳೆದ ಐದಾರು ವರ್ಷಗಳಲ್ಲಿ 1,87,000 ಕೋಟಿ ನ್ಯಾಯಯುತವಾಗಿ ಬರಬೇಕಾಗಿದ್ದ ಅನುದಾನವನ್ನು ರಾಜ್ಯಕ್ಕೆ ನೀಡಲಾಗಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಮಾಡಲಾಗುತ್ತಿದೆ. ಜಂತರ್ ಮಂತರ್ ಐತಿಹಾಸಿಕ ಸ್ಥಳವಾಗಿದ್ದು, ಅನೇಕ ಚಳವಳಿಗೆ ಸಾಕ್ಷಿಯಾದ ಸ್ಥಳ. ಇಂತಹ ಜಾಗದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇದು ರಾಜಕೀಯ ಚಳವಳಿ ಅಲ್ಲ ಎಂದು ಸ್ಪಷ್ಟಪಡಿಸಿದರು.
14 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು 4.71 % ಬಂದಿತ್ತು. 15 ನೇ ಹಣಕಾಸು ಆಯೋಗದಲ್ಲಿ 3.64 % ಕ್ಕೆ ಇಳಿಯಿತು. ಇದರಿಂದ ರಾಜ್ಯಕ್ಕೆ ಬರುವ ತೆರಿಗೆಯಲ್ಲಿ ಶೇ. 40 ರಿಂದ 45 ರವರೆಗೆ ಕಡಿತವಾಗಿದೆ. ಒಟ್ಟಾರೆಯಾಗಿ 14 ನೇ ಹಣಕಾಸು ಆಯೋಗದ ಶಿಫಾರಸ್ಸನ್ನೇ 15 ನೇ ಹಣಕಾಸು ಆಯೋಗದಲ್ಲಿ ಅನುಸರಿಸಿದ್ದರೆ, ರಾಜ್ಯಕ್ಕೆ 62,098 ಕೋಟಿ ರಾಜ್ಯಕ್ಕೆ ಬರುತ್ತಿತ್ತು. ರಾಜ್ಯದಿಂದ ಒಟ್ಟು 4,30,000 ಕೋಟಿ ತೆರಿಗೆ ಮೊತ್ತವನ್ನು ಕೇಂದ್ರಕ್ಕೆ ನೀಡಲಾಗುತ್ತದೆ. ಅಂದರೆ 100 ರೂಪಾಯಿ ತೆರಿಗೆಯಲ್ಲಿ ರಾಜ್ಯಕ್ಕೆ ಕೇವಲ 12 ರಿಂದ 13 ರೂಪಾಯಿ ದೊರೆಯುತ್ತಿದೆ. ಇದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಎಂದು ವಿವರಿಸಿದರು.
ಕರ್ನಾಟಕದಿಂದ 25 ಸಂಸದರು ಆಯ್ಕೆಯಾಗಿದ್ದು, ಒಬ್ಬರೂ ಈ ಬಗ್ಗೆ ಕೇಂದ್ರ ಮುಂದೆ ಮಾತನಾಡಿಲ್ಲ. ಅಲ್ಲದೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅಥವಾ ಬಸವರಾಜ ಬೊಮ್ಮಾಯಿಯವರು ಈ ಅನ್ಯಾಯವನ್ನು ಸರಿಪಡಿಸುವ ಮನವಿ ಮಾಡಿರುವುದಿಲ್ಲ. ಈ ಎಲ್ಲ ಕಾರಣಗಳಿಗಾಗಿ ಇಂದು ನವದೆಹಲಿಯಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದರು.
ಜನರಿಗಾಗಿ ಹೋರಾಟ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲವಾಗಿದೆ. ನಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಹೇಳಿದ್ದರೂ ಇವರು ಕಿವಿಗೆ ಹಾಕಿಕೊಂಡಿಲ್ಲ. ಹೀಗಾಗಿ ನಾವು ಇಲ್ಲಿಗೆ ಬಂದು ಹೋರಾಟ ಮಾಡುತ್ತಿದ್ದೇವೆ’ ಎಂದರು.
ನಮ್ಮ ಪಾಲಿನ ಹಣ ನಾವು ಕೇಳುತ್ತಿದ್ದೇವೆ. ಬೇರೆ ರಾಜ್ಯಗಳು ಲಾಭ ಪಡೆಯಲಿ. ನಮಗೆ ಅದರ ಬಗ್ಗೆ ಆಕ್ಷೇಪವಿಲ್ಲ. ಕೇಂದ್ರ ಸರ್ಕಾರ ಗುಜರಾತಿಗೆ ಗಿಫ್ಟ್ ಸಿಟಿ ಯೋಜನೆ ನೀಡಿದೆ. ನಮ್ಮ ರಾಜ್ಯಕ್ಕೂ ಒಂದು ಗಿಫ್ಟ್ ಸಿಟಿ ನೀಡಲಿ. ಎಲ್ಲಾ ರಾಜ್ಯಗಳಿಗೂ ಇಂತಹ ಯೋಜನೆ ನೀಡಲಿ. ಭಾರತ ಒಕ್ಕೂಟ ರಾಷ್ಟ್ರ. ನಮಗೂ ಯೋಜನೆ ನೀಡಿ ಎಂದು ನಾವು ಆಗ್ರಹಿಸುತ್ತಿದ್ದೇವೆ. ನಮಗೆ ಅವಕಾಶ ನೀಡಿದರೆ ನಾವು ಅವರಿಗಿಂತ ಹೆಚ್ಚು ಉತ್ತಮವಾಗಿ ಕೆಲಸ ಮಾಡಿ ತೋರಿಸುತ್ತೇವೆ. ನಮ್ಮ ರಾಜ್ಯದ ತೆರಿಗೆ, ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಪಾಲಿನ ಅನುದಾನ ನೀಡಲಿ’ ಎಂದು ಆಗ್ರಹಿಸಿದರು.
ನಮ್ಮ ಪ್ರತಿಭಟನೆಯನ್ನು ಟೀಕಿಸುವವರು ರಾಜ್ಯಕ್ಕೆ ನೀಡಿದ ಕೊಡುಗೆಯೇನು ಎಂದು ಹೇಳಬೇಕಿದೆ. ನಾವು ಭಾವನಾತ್ಮಕ ವಿಚಾರದ ಮೇಲೆ ರಾಜಕಾರಣ ಮಾಡುತ್ತಿಲ್ಲ. ಜನರ ಬದುಕಿಗಾಗಿ ರಾಜಕಾರಣ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‍ನ ಪ್ರತಿಭಟನೆಯನ್ನು ಟೀಕಿಸುವವರು ಮೊದಲು ಪ್ರಧಾನಿ ನರೇಂದ್ರ ಮೋದಿ ಎದುರು ನಿಂತು ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಉಸಿರು ಬಿಡಲಿ ಎಂದು ಸವಾಲು ಹಾಕಿದರು. ಹಣಕಾಸು ಆಯೋಗವೇ ಅನುದಾನ ಹಂಚಿಕೆ ಮಾಡುತ್ತದೆ ಎಂದು ಸಮರ್ಥನೆ ಮಾಡಿಕೊಳ್ಳುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ರವರು ಕರ್ನಾಟಕವನ್ನು ಪ್ರತಿನಿಧಿಸುತ್ತೇವೆ ಎಂಬುದನ್ನು ಮರೆತಿದ್ದಾರೆ. ಎಲ್ಲವೂ ಆಯೋಗವೇ ಮಾಡುವುದಾದರೆ ಕೇಂದ್ರ ಸರ್ಕಾರದ ಅಸ್ತಿತ್ವವಾದರೂ ಏಕೆ? ಅನ್ಯಾಯವಾದಾಗ ಅದನ್ನು ಸರಿಪಡಿಸುವುದು ಕೇಂದ್ರದ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆ ಸಮಯದಲ್ಲಿ ಮಾತನಾಡಿದಎಲ್ಲಾ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಈ ರೀತಿಯ ತಾರತಮ್ಯಖಂಡನೀಯ. ದೇಶದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ತೆರಿಗೆ ಹಂಚಿಕೆಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೇಂದ್ರ ಸರ್ಕಾರ ವಿತಂಡವಾದಗಳ ಮೂಲಕ ತನ್ನ ಮಲತಾಯಿ ಧೋರಣೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ ಎಂದು ನಾಯಕರು ವಾಗ್ದಾಳಿ ನಡೆಸಿದರು
ಕರ್ನಾಟಕದಿಂದ 4.30 ಲಕ್ಷ ಕೋಟಿ ರೂ. ತೆರಿಗೆ ಹಾಗೂ ಸೆಸ್‍ಗಳನ್ನು ಸಂಗ್ರಹಿಸುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಮರಳಿ 50 ಸಾವಿರ ಕೋಟಿ ರೂ.ಗಳನ್ನು ಮಾತ್ರ ನೀಡುತ್ತಿದೆ. ನಮ್ಮ ಸಂಪನ್ಮೂಲವನ್ನೆಲ್ಲಾ ಉತ್ತರ ಭಾರತದ ರಾಜ್ಯಗಳಿಗೆ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದರು.