ಬೆಂಗಳೂರು, ಏ.19: ಲೋಕಸಭೆ Election ಕಾವು ತೀವ್ರಗೊಂಡಿರುವ ಬೆನ್ನಲ್ಲೇ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಕಂಡುಬರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕನಿಷ್ಠ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ತೆರಿಗೆ ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿ ಸರ್ಕಾರ ಕನ್ನಡನಾಡಿಗೆ ದ್ರೋಹ ಬಗೆದಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಘೋಷಿಸಿದ್ದ ಹಣವನ್ನೂ ಬಿಡುಗಡೆ ಮಾಡಿಲ್ಲ. ರಾಜ್ಯದ ಜನರಿಗೆ ಇದು ಅರ್ಥವಾಗಿದೆ. ಹೀಗಾಗಿ ಕಾಂಗ್ರೆಸ್ಗೆ ಜನರು ವ್ಯಾಪಕವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಂತೂ ಅನಿರೀಕ್ಷಿತ ಮುನ್ನಡೆ ಕಂಡುಬರುತ್ತಿದೆ. ಲೋಕಸಭೆಯಲ್ಲಿ 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ್ ಅನ್ಯ ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಹೋಗಿದ್ದರು. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿರುವವರು ಇರಲು ಸಾಧ್ಯವಾಗುವುದಿಲ್ಲ. ಅದು ಅರಿವಾಗಿ ಇಂದು ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ಸೇರಿರುವುದು ಅವರ ಒಳ್ಳೆಯ ತೀರ್ಮಾನ. ಕಲಬುರಗಿಯಲ್ಲಷ್ಟೇ ಅಲ್ಲ, ರಾಜ್ಯಾದ್ಯಂತ ಅವರ ಪ್ರಭಾವ ಇದೆ ಎಂದು ಹೇಳಿದರು
ಕಾಂಗ್ರೆಸ್ ಬಿಟ್ಟು ಹೋಗದಂತೆ ಈ ಮೊದಲೇ ಅವರಿಗೆ ಸಲಹೆ ನೀಡಿದ್ದೆ. ಒಂದು ವೇಳೆ ವಾಪಸ್ ಬರುವುದಾದರೆ ಮುಕ್ತ ಆಹ್ವಾನವಿದೆ ಎಂದು ಆಗಲೇ ತಿಳಿಸಿದ್ದೆ ಶಾರದಾ ಮೋಹನಶೆಟ್ಟಿ ಮತ್ತು ಮಾಲಿಕಯ್ಯ ಗುತ್ತೇದಾರ್ ಸೇರ್ಪಡೆಯಿಂದ ಉತ್ತರಕನ್ನಡ ಮತ್ತು ಕಲಬುರಗಿ ಭಾಗಗಳಲ್ಲಿ ನಮ್ಮ ಕ್ಷೇತ್ರದ ಶಕ್ತಿ ಹೆಚ್ಚಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ ಎಂದರು.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಹಲವರು ಬಿಜೆಪಿ-ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಜನರ ಬದುಕನ್ನು ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಬರುತ್ತಿದ್ದಾರೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವ ಎಲ್ಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಸ್ಥಳೀಯ ನಾಯಕರಿಗೂ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಬೇಸರಗೊಂಡಿರುವ ಉಭಯ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ದೇಶದ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಎಲ್ಲರಿಗೂ ವಿಶ್ವಾಸ ಬಂದಿದೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಮಾಲೀಕಯ್ಯ ಗುತ್ತೇದಾರ್ ಅವರ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಆನೆ ಬಲ ಬಂದಂತಾಗಿದೆ ಎಂದರು ಬಿಜೆಪಿ ಸಮಾಜವನಷ್ಟೇ ಅಲ್ಲ ಕುಟುಂಬಗಳನ್ನು ಒಡೆಯುತ್ತಿದೆ.
ಹೋರಾಟದಿಂದ ಬಂದವರಿಗೆ ಬಿಜೆಪಿಯಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ಆ ಪಕ್ಷದ ಕಾರ್ಯಕರ್ತರೆ ಹೇಳುತ್ತಿದ್ದಾರೆ. ಸತ್ಯಜಿತ್ ಸುರತ್ಕಲ್ ಆರ್ ಎಸ್‌ಎಸ್‌ನಿಂದ ಬಂದವರು ಅವರಿಗೆ ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ. ಶೂದ್ರರಾಗಿ ಹುಟ್ಟಿದರೆ ಬಿಜೆಪಿಯಲ್ಲಿ ಜಾಗವಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯವಿದೆ ಹಾಗಾಗಿ ಎಲ್ಲರೂ ಪಕ್ಷ ಸೇರುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.