ಬೆಳಗಾವಿ,ಡಿ.13- ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯಾವುದೇ ಹೊಸ ಯೋಜನೆ ಜಾರಿಯಾಗುತ್ತಿಲ್ಲ. ಈಗ ಘೋಷಣೆ ಮಾಡಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ವಿಧಾನಸಭೆಯಲ್ಲಿಬಆಡಳಿತ ಪಕ್ಷದ ಕೆಲ ಶಾಸಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಸ್ವಪಕ್ಷೀಯ ಶಾಸಕರ ಈ ನಡವಳಿಕೆ ಸರ್ಕಾರ ಹಾಗೂ ಸಚಿವರನ್ನು ಮುಜುಗರಕ್ಕೆ ಸಿಲುಕಿಸಿತು.
ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜು.ವಿ.ಶಿವಗಂಗಾ ಪ್ರಶ್ನೋತ್ತರ ಕಲಾಪಕ್ಕೆ ತಡವಾಗಿ ಬಂದರು. ಅಡಳಿತ ಪಕ್ಷದ ಶಾಸಕರ ಸದನಕ್ಕೆ ತಡವಾಗಿ ಬಂದಿದ್ದನ್ನು ಕಂಡ ಸಭಾಧ್ಯಕ್ಷ ಖಾದರ್ ಅವರು, ವಿಳಂಬಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಬಸವರಾಜು.ವಿ.ಶಿವಗಂಗಾ ನಾನು ಬಿಳಿ ಶರ್ಟ್ ಧರಿಸಿ ಸದನಕ್ಕೆ ಬಂದಿದ್ದೆ.ಆದರೆ ಹಿಂದುಳಿದ ವರ್ಗಗಳ ಇಲಾಖೆ ನಿಷ್ಕ್ರಿಯವಾಗಿದೆ.ಎಂಬುದನ್ನು ತೋರಿಸಬೇಕು ಹಾಗೂ ಅದರ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ಕಪ್ಪು ಬಣ್ಣದ ಶರ್ಟ್ ಧರಿಸಿ ಬರಲು ಹೊರಗೆ ಹೋದೆ,ಇದಕ್ಕಾಗಿ ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು,ಆ ರೀತಿಯೆಲ್ಲಾ ಕಪ್ಪು ಧರಿಸುವಂತಿಲ್ಲ. ಆದರೂ ಪರವಾಗಿಲ್ಲ ನಿಮಗೆ ಕಪ್ಪು ಬಟ್ಟೆ ಚೆನ್ನಾಗಿ ಕಾಣುತ್ತಿದೆ ಎಂದರು ಇದಾದ ನಂತರ ತಮ್ಮ ಅಸಮಾಧಾನ ಹೊರಹಾಕಿದ ಬಸವರಾಜ್ ವಿ.ಶಿವಗಂಗಾ, ಹಿಂದುಳಿದ ವರ್ಗಗಳ ಇಲಾಖೆಗೆ ಬರುವ ವಿವಿಧ ಅಭಿವೃದ್ಧಿ ನಿಗಮಗಳ ಸಾಲ ಸೌಲಭ್ಯಕ್ಕೆ ಭೌತಿಕ ಗುರಿ ಈಡೇರದೆ ಬಡವರಿಗೆ ಸೌಲಭ್ಯ ವಂಚಿತವಾಗುತ್ತಿದೆ ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳ ಇಲಾಖೆಯ ಸೌಲಭ್ಯಕ್ಕೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ 12, ಸ್ವಯಂ ಉದ್ಯೋಗಕ್ಕಾಗಿ 4, ಸ್ವಾವಲಂಬಿ ಸಾರಥಿ ಯೋಜನೆಯಡಿ 2ಫಲಾನುಭವಿಗಳಿಗೆ ಮಾತ್ರ ಮಂಜೂರಾತಿ ಸಿಕ್ಕಿದೆ.
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕಾರ್ಯದರ್ಶಿಯೊಬ್ಬರು ನಿಮ್ಮದೇ ಸರ್ಕಾರ, ಹೋಗಿ ಮುಖ್ಯಮಂತ್ರಿಯವರನ್ನೇ ಕೇಳಿ ಎಂದು ಉದ್ಧಟತನದಿಂದ ಉತ್ತರಿಸುತ್ತಾರೆ. ನಾನು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಸದಸ್ಯನಾಗಿದ್ದೇನೆ. ಇಲಾಖೆ ಅಧಿಕಾರಿಗಳು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕೋಟ್ಯಂತರ ರೂ. ಖರ್ಚು ಮಾಡಿ ಸಮಾವೇಶ ಮಾಡಲಾಗುತ್ತದೆ, ಬಡವರಿಗೆ ಸೌಲಭ್ಯ ನೀಡಲು ಹಣವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಸಭಾಧ್ಯಕ್ಷರು ಕೋಟ್ಯಂತರ ರೂ. ಖರ್ಚು ಮಾಡಿ ಶಾಸಕರಾಗಲು ಸಾಧ್ಯವಾಗಿರುವಾಗ ಬಡವರಿಗೆ ಕೊಡಲು ಹಣವಿಲ್ಲವೇ ಎಂದು ತಿರುಗೇಟು ನೀಡಿದರು.
ಶಾಸಕ ನರೇಂದ್ರಸ್ವಾಮಿ ಕೂಡ ಇಲಾಖೆಯ ಕಾರ್ಯದರ್ಶಿ ವಿರುದ್ಧ ಆಕ್ರೋಶ ಹೊರಹಾಕಿದರು.ಆಡಳಿತ ಪಕ್ಷದ ಶಾಸಕರ ಅಸಮಾಧಾನಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಶರಣು ಸಲಗಾರ, ಆಡಳಿತ ಪಕ್ಷದ ಶಾಸಕರೇ ಈ ಸರ್ಕಾರ ದಿವಾಳಿಯಾಗಿದೆ, ನಿಷ್ಕ್ರಿಯವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಕಿಚಾಯಿಸಿದರು.
ಆಗ ಕಾಂಗ್ರೆಸ್ ನ ರೂಪಾ ಶಶಿಧರ್, ಶರತ್ ಬಚ್ಚೇಗೌಡ, ಕೋನರೆಡ್ಡಿ ಮತ್ತಿತರರು ಇದು ಆರು ತಿಂಗಳ ಸಮಸ್ಯೆಯಲ್ಲ,ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಸಮಜಾಯಿಷಿ ನೀಡಲು ಹೊರಟಾಗ ಸಚಿವ ಶಿವರಾಜ ತಂಗಡಗಿ , ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನಮ್ಮ ಅಭಿಲಾಷೆ ಕೂಡ. ಆದರೆ ಹಣಕಾಸಿನ ಇತಿಮಿತಿಗಳು ಅದಕ್ಕೆ ಸಹಕರಿಸುವುದಿಲ್ಲ ಲಭ್ಯತೆ ಆಧರಿಸಿ ಆದ್ಯತೆ ಮೇರೆಗೆ ಸೌಲಭ್ಯ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಉತ್ತರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಶಾಸಕರು ಪ್ರಸ್ತಾಪಿಸಿದಂತೆ ನಮ್ಮಲ್ಲಿ ಹಾಸ್ಟೆಲ್ ವಾರ್ಡ್ ಗಳ ಕೊರತೆ ಇರುವುದು ನಿಜ. ಒಬ್ಬೊಬ್ಬರಿಗೆ ನಾಲ್ಕು-ಐದು ಹಾಸ್ಟೆಲ್ ಗಳ ಉಸ್ತುವಾರಿ ವಹಿಸಲಾಗಿದೆ. ಬೇರೆ ಇಲಾಖೆಗಳಿಂದಲೂ ಕೂಡ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ಕರೆಸಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯದರ್ಶಿ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಹಣಕಾಸು ಲಭ್ಯತೆ ಹಿನ್ನೆಲೆಯಲ್ಲಿ ಕೆಲವು ವೇಳೆ ಶಾಸಕರಿಗೆ ನೋವಾಗುವಂತಹ ಘಟನೆಗಳು ನಡೆದಿವೆ ಎಂದು ಸಚಿವರು ವಿಷಾದಿಸಿದರು.