Bengaluru
ವರ್ಗಾವಣೆ ಮತ್ತು ಲೈಂಗಿಕ ಹಗರಣಗಳ ಸೂತ್ರಧಾರ ಸ್ಯಾಂಟ್ರೋ ರವಿ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಿಜೆಪಿ ಸತ್ಯಗಳನ್ನು ಸಮಾಧಿ ಮಾಡಲು ಹೊರಟಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸ್ಯಾಂಟ್ರೋ ರವಿಯೊಳಗೆ ಅಡಗಿದ್ದ ಬಿಜೆಪಿಗರ ಭಯಂಕರ ಸತ್ಯಗಳನ್ನು ಸಮಾಧಿ ಮಾಡಲು ಹೊರಟಿದೆಯೇ ಸರ್ಕಾರ? CID ಕಸ್ಟಡಿಯಲ್ಲಿರುವ ಸ್ಯಾಂಟ್ರೋ ರವಿ ಆತ್ಮಹತ್ಯೆಗೆ ಯತ್ನಿಸಿದ್ದಾನಂತೆ’ ಎಂದು ಬರೆದುಕೊಂಡಿದೆ.
ಇದು ಆತ್ಮಹತ್ಯೆಯ ಯತ್ನವೋ, ಕೊಲೆಯ ಯತ್ನವೋ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಸ್ಯಾಂಟ್ರೋ ರವಿಯನ್ನು ಮುಗಿಸುವ ಮೂಲಕ ಸರ್ಕಾರದ ರಹಸ್ಯಗಳನ್ನೂ ಮುಗಿಸುವ ಹುನ್ನಾರ ನಡೆದಿದೆಯೇ ಮುಖ್ಯಮಂತ್ರಿ ಬೊಮ್ಮಾಯಿಯವರೇ ಎಂದು ಕಟುವಾಗಿ ಟೀಕಿಸಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಯಾಂಟ್ರೋ ರವಿ ದೇಹ ಸ್ಥಿತಿ ಸುಧಾರಿಸಿದೆ ಎನ್ನಲಾಗುತ್ತಿದೆ.