ಬೆಂಗಳೂರು,ಡಿ.16-ರಾಜ್ಯದ ಇಂಧನ ಸಚಿವ ಕೆ.ಜೆ ಜಾರ್ಜ್ (KJ George) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಮಾಜಿ ಕಾರ್ಪೋರೇಟರ್ ಪುತ್ರ ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಐಟಿ ಸೆಲ್ ಉದ್ಯೋಗಿಯನ್ನು ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಕರೀಂನಗರದ ರವಿಕಾಂತ ಶರ್ಮಾ (33) ಬಂಧಿತ ಆರೋಪಿಯಾಗಿದ್ದಾನೆ,ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ನಾಯಕತ್ವದ ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಐಟಿ ಸೆಲ್ ಉದ್ಯೋಗಿಯಾಗಿದ್ದ.
ಬಿಆರ್‌ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಈ ಆರೋಪಿಯ ತಂದೆ ತಾಯಿ ಕೂಡ ಮಾಜಿ ಕಾರ್ಪೋರೇಟರ್‌ಗಳಾಗಿದ್ದಾರೆ.
ಆರೋಪಿ ರವಿಕಾಂತ ತೆಲಂಗಾಣ ವಿಧಾನಸಭೆ Election ವೇಳೆ ಈ ಪೋಸ್ಟ್ ಹಾಕಿದ್ದ. ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹಜ್ಯೋತಿ ಯೋಜನೆ ಬಗ್ಗೆ ಪೋಸ್ಟ್ ಹಾಕಿದ್ದು, ನಕಲಿ ಆಡಿಯೋ ಕ್ಲಿಪ್ ಒಂದನ್ನು ಶೇರ್ ಮಾಡಿ ಪೋಸ್ಟ್ ಮಾಡಿದ್ದ.
ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ