ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳ ಹೆಚ್ಚಳದಿಂದ ಪ್ರಕರಣಗಳ ಸಂಖ್ಯೆಯೂ ಏರಿಕೆ ಕಂಡಿದೆ. ಬುಧವಾರ 23,452 ಪರೀಕ್ಷೆಗಳನ್ನು ಮಾಡಲಾಗಿದ್ದು, 648 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
13 ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ಪತ್ತೆಯಾಗಿವೆ. ಸೋಂಕು ದೃಢ ಪ್ರಮಾಣ ಶೇ 2.76 ರಷ್ಟು ವರದಿಯಾಗಿದೆ. ಬೆಂಗಳೂರಿನಲ್ಲಿ 615 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸೋಂಕಿತರಲ್ಲಿ ಬೆಂಗಳೂರಿನ 72 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇವರು ಉಸಿರಾಟದ ಸಮಸ್ಯೆ ಹೊಂದಿದ್ದರು.
ಸಕ್ರಿಯ ಪ್ರಕರಣಗಳ ಸಂಖ್ಯೆ 4 ಸಾವಿರದ ಗಡಿ (3,997) ಸಮೀಪಿಸಿದೆ. ಬೆಂಗಳೂರಿನಲ್ಲಿಯೇ 3,843 ಸೋಂಕಿತರು ಇದ್ದಾರೆ. ಸಕ್ರಿಯ ಪ್ರಕರಣಗಳು ಐದು ಜಿಲ್ಲೆಗಳಲ್ಲಿ ಎರಡಂಕಿ ಹಾಗೂ 15 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ.
ರಾಜ್ಯದಲ್ಲಿ ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 39.57 ಲಕ್ಷ ದಾಟಿದೆ. 39.13 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ಗೆ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 40,067ಕ್ಕೆ ಏರಿಕೆಯಾಗಿದೆ.