ಬೆಂಗಳೂರು,ಡಿ. 22-
ಹಣದಾಸೆಗೆ ಬಿದ್ದು ಭಾರತೀಯ ನೌಕಾಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತಿದ್ದ ದೇಶದ್ರೋಹಿಯೊಬ್ಬ ಉಡುಪಿಯ ಮಲ್ಪೆಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ದೇಶದ್ರೋಹದ ಗಂಭೀರ ಆರೋಪ ಪ್ರಕರಣದ ಸಂಬಂಧ ಮಲ್ಪೆ ಪೊಲೀಸರುಗುಜರಾತ್ನ ಆನಂದ ತಾಲೂಕಿನ ಕೈಲಾಸ್‌ನಗರಿಯ ಹಿರೇಂದ್ರ (34) ಎಂಬಾತನನ್ನು ಬಂಧಿಸಿದ್ದಾರೆ.
ಈತನ ಬಂಧನದಿಂದ ಈ ನಿರ್ದಿಷ್ಟ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಈ ಹಿಂದೆ ಇದೇ ಪ್ರಕರಣದಲ್ಲಿ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಎಂಬ ಇಬ್ಬರನ್ನು ಮಲ್ಪೆ ಪೊಲೀಸರು ಬಂಧಿಸಿದ್ದರು. ಇವರಿಬ್ಬರೂ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್ ಯಾರ್ಡ್ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಪೊಲೀಸ್ ತನಿಖೆಯ ಪ್ರಕಾರ, ಹಿರೇಂದ್ರ ಹಣ ಪಡೆದು ರೋಹಿತ್ ಹಾಗೂ ಸಂತ್ರಿಗೆ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಒದಗಿಸಿದ್ದನು. ಆ ಸಿಮ್‌ಗಳ ಮೂಲಕ ಇಬ್ಬರೂ ಪಾಕಿಸ್ತಾನದಲ್ಲಿರುವ ವ್ಯಕ್ತಿಗಳಿಗೆ ಭಾರತೀಯ ನೌಕಾಪಡೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಗಳನ್ನು ರವಾನಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಭಾರತೀಯ ನೌಕಾಪಡೆಯ ಹಡಗುಗಳ ಸಂಖ್ಯೆ, ಚಲನವಲನ ಹಾಗೂ ಇತರೆ ರಹಸ್ಯ ವಿವರಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಮತ್ತು ಸಂತ್ರಿ ಅವರ ಚಟುವಟಿಕೆಗಳು ಸಂಶಯಾಸ್ಪದವಾಗಿದ್ದ ಹಿನ್ನೆಲೆಯಲ್ಲಿ, ಶಿಪ್ ಯಾರ್ಡ್ ಅಧಿಕಾರಿಗಳು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆಗ ಅನೇಕ ಸ್ಫೋಟಕ ಸಂಗತಿಗಳು ಬಯಲಾಗಿವೆ. ಹಿರೇಂದ್ರ ಪಾತ್ರದ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
ಬಂಧಿತ ಆರೋಪಿಗಳಾದ ರೋಹಿತ್ ಮತ್ತು ಸಂತ್ರಿ ‘ಸುಷ್ಮಾ ಮೆರಿನ್ ಪ್ರೈವೇಟ್ ಲಿಮಿಟೆಡ್’ ಮೂಲಕ ಗುತ್ತಿಗೆ ಆಧಾರದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ಆರೋಪಿಗಳು ಸುಮಾರು ಒಂದೂವರೆ ವರ್ಷಗಳಿಂದ ಹಡಗುಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ, ರಹಸ್ಯ ತಾಂತ್ರಿಕ ಮಾಹಿತಿಗಳನ್ನು ವಾಟ್ಸ್‌ಆ್ಯಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ.
ಪ್ರಮುಖ ಇಬ್ಬರು ಆರೋಪಿಗಳಾದ ರೋಹಿತ್ ಮತ್ತು ಸಂತ್ರಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಹಿರೇಂದ್ರನನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಜಾಲ ರಾಜ್ಯಾದ್ಯಂತ ಹಾಗೂ ವಿದೇಶ ಸಂಪರ್ಕ ಹೊಂದಿರುವುದರಿಂದ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗಳು ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
Previous Articleಭಾರತಕ್ಕೆ ಇನ್ನೊಬ್ಬ ವೈರಿ ಹುಟ್ಟಿಕೊಂಡನೇ?
Next Article ಕೊಲ್ಲೂರು ಮೂಕಾಂಬಿಕಾ ಹೆಸರಲ್ಲಿ ವಂಚನೆ

