ಬೆಂಗಳೂರು,ಸೆ.23:
ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ದೃಷ್ಟಿಯಿಂದ
ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಇನ್ನು ಮುಂದೆ ನೋಟಿಸ್ ನೀಡಿ ದಂಡ ವಿಧಿಸುವ ಬದಲು ಚಾಲನಾ ಪರವಾನಗಿಯನ್ನೇ ರದ್ದು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ
ನೀಡಿದ್ದಾರೆ.
ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಅಡಿಯಲ್ಲಿ ನೂತನವಾಗಿ 45 ಆ್ಯಂಬುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ಜನಸಾಮಾನ್ಯರು ಹಾಗೂ ವಾಹನ ಸವಾರರು ನಿಯಮಗಳನ್ನು ಪಾಲನೆ ಮಾಡದೇ ಇದ್ದರೆ ಅಪಘಾತಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಚಾಲನಾ ಪರವಾನಗಿ ರದ್ದು ಮಾಡುವ ವ್ಯವಸ್ಥೆ ವಿದೇಶದಲ್ಲಿದೆ. ನಮ್ಮಲ್ಲೂ ಅದೇ ಪದ್ಧತಿಯನ್ನು ಪಾಲನೆ ಮಾಡಿ. ನೋಟಿಸ್ ಕೊಡುವುದು ಬೇಡ. ನೇರವಾಗಿ ಪರವಾನಗಿ ರದ್ದು ಮಾಡಿ, ತಪ್ಪು ಮಾಡಿದವರು ಕೋರ್ಟ್ ಗೆ ಹೋಗಲಿ ಎಂದು ಸೂಚನೆ ನೀಡಿದರು.
ಇಲ್ಲಿ ಮೂತ್ರವಿಸರ್ಜನೆ ಮಾಡಬೇಡಿ ಎಂದು ಬೋರ್ಡ್ ಇದ್ದರೆ ನಿಷೇಧಿತ ಕೆಲಸವನ್ನು ಅಲ್ಲಿಯೇ ಮಾಡಿ ಸಬೂಬು ಹೇಳುತ್ತಾರೆ. ಈ ರೀತಿಯ ಧೋರಣೆಗಳನ್ನು ಜನರು ಬಿಟ್ಟು ಬದಲಾಗಬೇಕು. ನಿಯಮ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ. ವಾಹನಗಳನ್ನು ಸುರಕ್ಷತಾ ಸ್ಥಿತಿಯಲ್ಲಿಟ್ಟುಕೊಂಡಿರಬೇಕು. ನನಗೆ ಡ್ರೈವಿಂಗ್ ಬರುವುದಿಲ್ಲ, ತುಂಬಾ ಜನ ಫೋನಿನಲ್ಲಿ ಮಾತನಾಡುತ್ತಲೇ ವಾಹನ ಚಲಾವಣೆ ಮಾಡುವುದನ್ನು ನೋಡಿದ್ದೇನೆ. ವೇಗಮಿತಿ 80 ಕಿ.ಮೀ. ಇದ್ದರೆ 120 ಕಿ.ಮೀ. ವೇಗದಲ್ಲಿ ಗಾಡಿ ಓಡಿಸುತ್ತಾರೆ ಎಂದು ಹೇಳಿದರು.
ಅಪಘಾತದಂತಹ ಸಂದರ್ಭದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳ ಜೀವಹಾನಿಯಾದರೆ ಮುಂದೆ ಅವರಿಂದ ದೇಶಕ್ಕೆ ದೊರೆಯಬಹುದಾದ ಸೇವೆಗಳು ಇಲ್ಲವಾಗುತ್ತವೆ. ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಗಾಯಾಳುಗಳಾದಾಗ ಜೀವನವೇ ತೊಂದರೆಗೊಳಗಾಗುತ್ತದೆ ಎಂದು ಹೇಳಿದರು
ರಾಜ್ಯದಲ್ಲಿ ಪ್ರತಿವರ್ಷ 40 ಸಾವಿರ ಅಪಘಾತಗಳಾಗುತ್ತಿವೆ. ಅದರಲ್ಲಿ 9 ರಿಂದ 10 ಸಾವಿರ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಪಘಾತಗಳನ್ನು ತಗ್ಗಿಸಲು 2017 ರಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರ ರಚನೆಯಾಗಿದೆ. ಅದರಲ್ಲಿ ಸಂಗ್ರಹಿಸಲಾಗುವ ನಿಧಿಯಲ್ಲಿ 45 ಕೋಟಿ ರೂ.ಗಳನ್ನು ಆರೋಗ್ಯ ಇಲಾಖೆಗೆ ನೀಡಲಾಗಿದ್ದು, ಇದರಿಂದ 65 ಹೊಸ ಆ್ಯಂಬುಲೆನ್‌್ಸಗಳನ್ನು ಖರೀದಿಸಲಾಗಿದೆ ಎಂದರು.