ಬೆಣ್ಣೆ ನಗರಿ,ಕಾಟನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ದಾವಣಗೆರೆ ಲೋಕಸಭಾ ಕ್ಷೇತ್ರ ಕುಟುಂಬ ರಾಜಕಾರಣಕ್ಕೆ ಹೆಸರಾಗಿದೆ. ಕಳೆದ ಆರು Electionಗಳಲ್ಲಿ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಕುಟುಂಬ ಹಾಗೂ ಕರ್ನಾಟಕ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬವೇ ಎದುರಾಳಿಗಳಾಗಿ ಸ್ಪರ್ಧೆ ಮಾಡಿದೆ.
ಕಾಂಗ್ರೆಸ್ ನಲ್ಲಿ ಶಾಮನೂರು ಶಿವಶಂಕಪ್ಪ ದೊಡ್ಡ ಹಿಡಿತ ಹೊಂದಿದ್ದರೆ,ಬಿಜೆಪಿಯಲ್ಲಿ ಜಿ.ಎಂ.ಸಿದ್ದೇಶ್ ತಮ್ಮದೆ ಆದ ಪ್ರಭಾವ ಹೊಂದಿದ್ದಾರೆ.
ಸ್ವಾತಂತ್ರ್ಯ ನಂತರ ದಾವಣಗೆರೆಯು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿತ್ತು. 1977ರಲ್ಲಿ ಬೇರ್ಪಟ್ಟು ಮಧ್ಯ ಕರ್ನಾಟಕದ ಪ್ರತ್ಯೇಕ ಕ್ಷೇತ್ರವಾಗಿ ಹೊರಹೊಮ್ಮಿತ್ತು. ಇನ್ನು ಪ್ರತ್ಯೇಕ ಲೋಕಸಭೆ ಬಳಿಕ ಇಲ್ಲಿವರೆಗೆ 12 ಮಹಾ ಚುನಾವಣೆಗಳು ನಡೆದಿವೆ. ಈಗ 13ನೇ ಚುನಾವಣೆ ನಡೆಯುತ್ತಿದೆ.
ಕ್ಷೇತ್ರದಲ್ಲಿ ಒಟ್ಟು ಒಟ್ಟು 16.2 ಲಕ್ಷ ಮತದಾರರಿದ್ದು,ಇದರಲ್ಲಿ ಪುರುಷರು 8.2 ಲಕ್ಷ ಹಾಗೂ 8 ಲಕ್ಷ ಮಹಿಳೆಯರಿದ್ದಾರೆ.
ಇಂತಹ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಮಹಿಳೆಯರು ಆಯ್ಕೆ ಬಯಸಿ ಕಣಕ್ಕಿಳಿಯುವ ಮೂಲಕ ರಾಜಕೀಯ ಆಸಕ್ತರ ಗಮನ ಸೆಳೆದಿದೆ. ಹಾಲಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಈ ಕ್ಷೇತ್ರದಿಂದ ಮತ್ತೊಂದು ಬಾರಿ ಆಯ್ಕೆ ಬಯಸಿ ಟಿಕೆಟ್ ಕೋರಿದ್ದರು.ಆದರೆ,ಆಡಳಿತ ವಿರೋಧಿ ಅಲೆ ಸೇರಿದಂತೆ ಹಲವು ಕಾರಣದಿಂದಾಗಿ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನಿರಾಕರಿಸಿತು. ಹೈಕಮಾಂಡ್ ನಿಲುವು ತಿಳಿದ ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ಹಲವರು ಟಿಕೆಟ್ ಗಾಗಿ ಬೇಡಿಕೆಯಿಟ್ಟು,ಇದಕ್ಕಾಗಿ ವಿಶೇಷ ಪ್ರಯತ್ನ ಮಾಡಿದರು.ಆದರೆ, ಸಿದ್ದೇಶ್ವರ ಪಟ್ಟು ಸಡಿಲಿಸಲಿಲ್ಲ.ಟಿಕೆಟ್ ಬೇಕೇ ಬೇಕು ಎಂದು ಪ್ರಬಲ ಹೋರಾಟ ನಡೆಸಿದರು. ತನಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದರೆ ನನ್ನ ಪತ್ನಿಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಹೈಕಮಾಂಡ್ ಮನವೊಲಿಸಿದರು.
ಪರಿಣಾಮವಾಗಿ ಬಿಜೆಪಿ ಹೈಕಮಾಂಡ್ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಿದೆ. ಮತ್ತೊಂದಡೆಯಲ್ಲಿ ಕಾಂಗ್ರೆಸ್ ಕಳೆದ 1999 ರಿಂದ ಈ ಕ್ಷೇತ್ರವನ್ನು ಕಳೆದುಕೊಂಡಿದ್ದು ಮರಳಿ ಪಡೆಯಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಇದಕ್ಕಾಗಿ ಈ ಬಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರನ್ನು ಕಣಕ್ಕಿಳಿಸಲು ಬಯಸಿತ್ತು ಆದರೆ ಅವರು ಕಣಕ್ಕಿಳಿಯಲು ನಿರಾಕರಿಸಿ ತಮ್ಮ ಪತ್ನಿ ಪ್ರಭಾವತಿ ಮಲ್ಲಿಕಾರ್ಜುನ್ ಅವರನ್ನು ಕಣಕ್ಕಿಳಿಯುವಂತೆ ಮಾಡಿದ್ದಾರೆ.
ಈ ಮೂಲಕ ದಾವಣಗೆರೆ ರಾಜಕಾರಣದ ಸಾಂಪ್ರದಾಯಿಕ ಎದುರಾಳಿಗಳ ಕುಟುಂಬದಿಂದ ಇದೀಗ ಮಹಿಳೆಯರು ಅಖಾಡಕ್ಕೆ ಧುಮುಕುವ ಮೂಲಕ ಹೊಸ ರಾಜಕೀಯ ಬೆಳವಣಿಗೆ ನಡೆದಿದೆ.
ಸಾಂಪ್ರದಾಯಿಕ ಎದುರಾಳಿಗಳ ಈ ಸ್ಪರ್ಧೆಗೆ ಎರಡು ಪಕ್ಷಗಳಲ್ಲೂ ಅಪಸ್ವರ ಕೇಳಿಬಂದಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿನಯ್ ಇದೀಗ ಬಂಡಾಯದ ಬಾವುಟ ಹಾರಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರೇಣುಕಾಚಾರ್ಯ ಮತ್ತು ಮಾಜಿ ಸಚಿವ ರವೀಂದ್ರನಾಥ್ ಹೈಕಮಾಂಡ್ ಸಂಧಾನಕ್ಕೆ ಮಣಿದು ಬಂಡಾಯದ ಬಾವುಟ ಇಳಿಸಿದರಾದರೂ, ಭಿನ್ನಮತದ ಕಾವು ಇನ್ನೂ ಆರಿಲ್ಲ.
ಬಿಜೆಪಿಯ ಈ ಭಿನ್ನಮತೀಯ ನಾಯಕರು ಇದೀಗ ಚುನಾವಣೆಯ ಪ್ರಚಾರದ ವೇಳೆ ಬಿಜೆಪಿಯ ಅಭ್ಯರ್ಥಿಯ ಹೆಸರಿನಲ್ಲಿ ಮತಯಾಚಿಸುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ ಮೇಲ್ನೋಟಕ್ಕೆ ಬಿಕ್ಕಟ್ಟು ಬಗೆಹರಿದೆ ಎಂಬಂತೆ ಕಾಣುತ್ತಿದೆ ಆದರೂ ಸಂಸದ ಜಿ ಎಂ ಸಿದ್ದೇಶ್ವರ ಮತ್ತು ಅವರ ವಿರೋಧಿ ಬಣಗಳ ನಡುವಿನ ಸಂಘರ್ಷ ತಣ್ಣಗಾಗಿಲ್ಲ.
ಒಟ್ಟಾರೆಯಾಗಿ ಕ್ಷೇತ್ರದ ಚಿತ್ರಣವನ್ನು ಗಮನಿಸುವುದಾದರೆ,ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಶಾಮನೂರು ಕುಟುಂಬ ಸದಸ್ಯರು ಶಾಸಕರಾಗಿದ್ದಾರೆ.
ದಾವಣಗೆರೆ ಉತ್ತರದಲ್ಲಿ ಪ್ರಭಾವತಿ ಅವರ ಪತಿ ಎಸ್.ಎಸ್ ಮಲ್ಲಿಕಾರ್ಜುನ, ದಾವಣಗೆರೆ ದಕ್ಷಿಣದಲ್ಲಿ ಅವರ ಮಾವ ಶಾಮನೂರು ಶಿವಶಂಕರಪ್ಪ ಶಾಸಕರಾಗಿದ್ದರೆ,ಜಗಳೂರಿನಲ್ಲಿ ಕಾಂಗ್ರೆಸ್ ನ ಬಿ ದೇವೇಂದ್ರಪ್ಪ.,ಮಾಯಕೊಂಡದಲ್ಲಿ ಕಾಂಗ್ರೆಸ್ ನ ಬಸವಂತಪ್ಪ. ಚನ್ನಗಿರಿಯಲ್ಲೊ – ಕಾಂಗ್ರೆಸ್ ನ ಶಿವಗಂಗಾ ಬಸವರಾಜು, ಹೊನ್ನಾಳಿಯ ಶಾಸಕರ ಶಾಂತನಗೌಡ ಕಾಂಗ್ರೆಸ್ ಗೆ ಸೇರಿದವರಾದರೆ ಹರಿಹರದಲ್ಲಿ ಬಿಜೆಪಿಯ ಬಿ.ಪಿ. ಹರೀಶ್ ಶಾಸಕರಾಗಿದ್ದಾರೆ. ಹರಪನಹಳ್ಳಿಯಲ್ಲಿ ಹಿರಿಯ ನಾಯಕ ದಿವಂಗತ ಎಂ.ಪಿ.ಪ್ರಕಾಶ್ ಅವರ ಪುತ್ರಿ ಲತಾ ಮಲ್ಲಿಕಾರ್ಜುನ್ ಪಕ್ಷೇತರರಾಗಿ ಆಯ್ಕೆಯಾಗಿದ್ದರು ಇದೀಗ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ಕಾಂಗ್ರೆಸ್ ಸಹ ಸದಸ್ಯರಾಗಿದ್ದಾರೆ.
ಈ ಹಿಂದೆ ದಾವಣಗೆರೆಯನ್ನು ಕರ್ನಾಟಕದ ಕೈಗಾರಿಕಾ ಕೇಂದ್ರ ಮತ್ತು ಮ್ಯಾಂಚೆಸ್ಟರ್ ಎಂದು ಕರೆಯಲಾಗುತ್ತಿತ್ತು.ಇದೆಲ್ಲಾ ಈಗ ಕೇವಲ ನೆನಪು ಮಾತ್ರ.ಈಗ ದಾವಣಗೆರೆಯಲ್ಲಿ ಆಂಜನೇಯ ಕಾಟನ್ ಮಿಲ್ ಸೇರಿದಂತೆ ಜಿಲ್ಲೆಯ ಬಹುತೇಕ ಕೈಗಾರಿಕೆಗಳು ಅಂಗಡಿ ಮುಚ್ಚಿರುವುದರಿಂದ ಉದ್ಯೋಗ ಅರಸಿ ಜನರು ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಉಳಿದವರು ಇಲ್ಲಿನ ಮಂಡಕ್ಕಿ ಬಟ್ಟೆಗಳಲ್ಲಿ ಬೇಯುತ್ತಿದ್ದಾರೆ. ಆದರೂ ದಾವಣಗೆರೆ ಇಂದಿಗೂ ವಾಣಿಜ್ಯ ಕೇಂದ್ರ ಹಾಗೂ ಶಿಕ್ಷಣದ ಪ್ರಮುಖ ಕೇಂದ್ರವಾಗಿದೆ.
ಮತದಾರರು ತಮ್ಮ ಸಂಸದರು ಜಿಲ್ಲೆಗೆ ವಿಮಾನ ನಿಲ್ದಾಣವನ್ನು ಮಂಜೂರು ಮಾಡಿ, ಸಾಫ್ಟ್‌ವೇರ್ ಪಾರ್ಕ್ ನ್ನು ವಿಸ್ತರಿಸಬೇಕು, ವಿಶೇಷ ಆರ್ಥಿಕ ವಲಯಗಳನ್ನು ರಚಿಸಬೇಕು, ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಬೇಕು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಇದರಿಂದ ದಾವಣಗೆರೆಗೆ ಕೈಗಾರಿಕಾ ಕೇಂದ್ರ ಎಂಬ ಪಟ್ಟವನ್ನು ಮರಳಿ ಪಡೆಯಬೇಕು ಎಂದು ಬಯಸುತ್ತಿದ್ದಾರೆ.
ಚುನಾವಣೆಯ ಸಮಯದಲ್ಲಿ ಮೊದ- ಮೊದಲು ಈ ವಿಚಾರಗಳು ವ್ಯಾಪಕವಾಗಿ ಚರ್ಚೆಗೆ ಬರುತ್ತವೆಯಾದರೂ, ಚುನಾವಣೆಯ ಕಾವು ತೀವ್ರಗೊಳ್ಳುತ್ತಿದ್ದಂತೆ ಜಾತಿ ಮತ್ತು ವೈಯಕ್ತಿಕ ವಿಷಯಗಳು ಪ್ರಧಾನವಾಗುತ್ತವೆ.
ದಾವಣಗೆರೆ ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೆ ಬಿಜೆಪಿ ಸೋತಿಲ್ಲ. ಹಾಗಾಗಿ ಮಧ್ಯಕರ್ನಾಟಕದ ಹೆಬ್ಬಾಗಿಲು ಕಮಲ ಪಡೆ ಭದ್ರಕೋಟೆ ಎನಿಸಿಕೊಂಡಿದೆ. ಈ ಬಾರಿ ಉಳಿಸಿಕೊಳ್ಳಲೇಬೇಕೆಂಬ ಹಠ ರಾಜ್ಯ ಘಟಕದ ನಾಯಕರು ಹಾಗೂ ಹೈಕಮಾಂಡ್ ಹೊಂದಿದೆ.
ಇದಕ್ಕೆ ತಕ್ಕಂತೆ ಸಂಸದ ಜಿಎಂ ಸಿದ್ದೇಶ್ವರ ಅವರು ತಮ್ಮೆಲ್ಲ ಪ್ರತಿಷ್ಠೆಯನ್ನು ಪಣಕಿಟ್ಟು ಪತ್ನಿಯ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದಲ್ಲಿ ಸಕ್ರಿಯವಾಗಿರುವುದು ಮತ್ತು ಅವರ ಪುತ್ರ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿರುವುದು ಇವರಿಗೆ ಹೆಚ್ಚಿನ ಬಲ ತಂದುಕೊಟ್ಟಿದೆ. ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಬಿಜೆಪಿ ಅಭ್ಯರ್ಥಿಗೆ ಸಾಕಷ್ಟು ಬಲ ತಂದುಕೊಟ್ಟಿದೆ.
ಬಣ ರಾಜಕಾರಣದಿಂದಾಗಿ ಕಾರ್ಯಕರ್ತರು ಎರಡು ಭಾಗಗಳಾಗಿ ವಿಭಜನೆಗೊಂಡರೂ ತಲೆ ಕೆಡಿಸಿಕೊಳ್ಳದೆ ಸಿದ್ದೇಶ್ವರ ಅವರು ತಮ್ಮದೇ ಆದ ಪಡೆಯನ್ನು ಕಟ್ಟಿಕೊಂಡು ರಾಜ್ಯಮಟ್ಟದ ನಾಯಕರ ವಿಶ್ವಾಸದೊಂದಿಗೆ ಕ್ಷೇತ್ರಾದ್ಯಂತ ಬಿರುಸಿನ ಪ್ರವಾಸ ಮಾಡುತ್ತಿದ್ದಾರೆ ತಮ್ಮನ್ನು ವಿರೋಧಿಸುವ ಗುಂಪುಗಳಿಗೆ ಗೆಲುವಿನ ಮೂಲಕ ಉತ್ತರ ನೀಡಬೇಕು ಎಂದು ಸಿದ್ದೇಶ್ವರ ಅವರು ಪಣ ತೊಟ್ಟಿದ್ದಾರೆ ಈ ಮೂಲಕ ಚುನಾವಣೆಯ ಆಖಾಡಕ್ಕೆ ಭರ್ಜರಿಗೆ ರಂಗು ಬಂದಿದೆ.
ಕಾಂಗ್ರೆಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿಗಳು ದೊಡ್ಡ ಲಾಭ ಬಂದು ಕೊಡುವ ನಿರೀಕ್ಷೆ ಇದೆ. ವಿಧಾನಸಭೆ ಚುನಾವಣೆಗೂ ಮುನ್ನ ಇಲ್ಲಿ ನಡೆದ ಸಿದ್ದರಾಮೋತ್ಸವ ಹೆಸರಿನ ಶಕ್ತಿ ಪ್ರದರ್ಶನ ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತ್ತು. ಈ ಚುನಾವಣೆಯಲ್ಲೂ ಹಾಗೂ ತನ್ನ ಪ್ರಭಾವ ಬೀರಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಕ್ಷೇತ್ರದಲ್ಲಿರುವ ಪ್ರಬಲ ಸಮುದಾಯವಾದ ಲಿಂಗಾಯತ ಸಮುದಾಯದ ಒಳ ಪಂಗಡಗಳು ಹಿಡಿಯುತ್ತವೆ ಎನ್ನುವುದರ ಮೇಲೆ ಚುನಾವಣೆಯ ಫಲಿತಾಂಶ ನಿರ್ಧಾರವಾಗಲಿದೆ.