ಬೆಂಗಳೂರು, ಜು.1:
ರಾಜ್ಯ ಕಾಂಗ್ರೆಸ್ ನಲ್ಲಿ ಇದೀಗ ಹೆಚ್ಚುವರಿ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮತ್ತು ನಾಯಕತ್ವ ಬದಲಾವಣೆ ಕುರಿತಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರ ನಡುವೆ ಉಪಮುಖ್ಯಮಂತ್ರಿ ಹುದ್ದೆಗೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಾಂವಿಧಾನಿಕ ಮಾನ್ಯತೆ ಮತ್ತು ಪವರ್ ಇಲ್ಲದ, ವೈಭವೀಕರಣದ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತನಾಡುವುದು ನಾನ್‌ಸೆನ್ಸ್ ಎಂದು ಕಿಡಿಕಾರಿದರು.
ಉಪಮುಖ್ಯಮಂತ್ರಿ ಹುದ್ದೆ ಎನ್ನುವುದು ಸಾಂವಿಧಾನಿಕ ಹುದ್ದೆ ಅಲ್ಲ ಅದು ಕೇವಲ ಅಲಂಕಾರಿಕ ಹುದ್ದೆ ಮಾತ್ರ ಹೀಗಾಗಿ ಜಾತಿಗೊಂದು ಉಪಮುಖ್ಯಮಂತ್ರಿಯ ಹುದ್ದೆ ಕೊಡಬೇಕು ಎಂಬ ಚರ್ಚೆಯನ್ನು ಬಿಟ್ಟು ರಾಜ್ಯದ ಜನರ ಸಮಸ್ಯೆಗಳತ್ತ ಗಮನಹರಿಸುವಂತೆ ಮಂತ್ರಿಗಳಿಗೆ ಸಲಹೆ ಮಾಡಿದರು.
ಬೇರೆ- ಬೇರೆ ಜಾತಿಯವರು ನಮ್ಮವರಿಗೆಯೇ ಡಿಸಿಎಂ ಹುದ್ದೆ ಕೊಡಿ ಎನ್ನುವುದು ತಪ್ಪು. ಇಂತಹ ಹುದ್ದೆಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಜಾತಿವಾರು ಮುಖ್ಯಮಂತ್ರಿ ಮಾಡಿದರೆ ಜನರು ನಮ್ಮ ಪಕ್ಷಕ್ಕೆ ವೋಟ್ ಹಾಕುತ್ತಾರೆ ಎಂದು ಎಲ್ಲ ಪಕ್ಷದವರು ತಿಳಿದುಕೊಂಡಿದ್ದಾರೆ. ಆದರೆ, ಜನರು ಬುದ್ಧಿವಂತರು. ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರೆ. ಸಿಎಂ ಹುದ್ದೆಗೆ ಅರ್ಹತೆಯ ಮಾನದಂಡವಾಗಿ ಇರಿಸಿಕೊಂಡು ಕೇಳಬೇಕು. ಅರ್ಹತೆ ಇಲ್ಲದವರು ಜಾತಿಯ ಹೆಸರು ಪ್ರಸ್ತಾಪಿಸಿ ಹುದ್ದೆ ಕೇಳುವುದು ತಪ್ಪು’ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯುತ್ತಮ ಆಡಳಿತಗಾರ. ಅವರನ್ನು ಸಿಎಂ ಸ್ಥಾನದಿಂದ ಇಳಿಸಬಾರದು. ಇನ್ನೂ ನಾಲ್ಕು ವರ್ಷ ಅವರೇ ಸಿಎಂ ಆಗಿದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ. ಸಾರ್ವಜನಿಕವಾಗಿ ಏನೇ ಚರ್ಚಿಸಿದರೂ ಸಿದ್ದರಾಮಯ್ಯ ಅವರನ್ನು ಇಳಿಸಲು ಆಗುವುದಿಲ್ಲ. ಅದು ಪಕ್ಷದ ಶಾಸಕರು ಹಾಗೂ ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದರು.
ಮುಖ್ಯಮಂತ್ರಿಬದಲಾವಣೆ ಬಗ್ಗೆ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ನೀಡಿದ್ದು ಸರಿಯಲ್ಲ. ಸಿಎಂ ಸ್ಥಾನ ಬಿಟ್ಟುಕೊಡಿ ಎನ್ನಲು ಅವರೇನು ಶಾಸಕಾಂಗ ಪಕ್ಷದ ಸದಸ್ಯರಾ? ಪಕ್ಷದ ವರಿಷ್ಠರಾ? ಧಾರ್ಮಿಕ ಮುಖಂಡರಾದವರು ಜನರಿಗೆ ಧರ್ಮದ ಬಗ್ಗೆ ಬೋಧನೆ ಮಾಡಬೇಕು. ಇಲ್ಲದಿದ್ದರೆ ಜನರಲ್ಲಿ ಅವರ ಬಗ್ಗೆ ಅಗೌರವ ಭಾವನೆ ಮೂಡುತ್ತದೆ. ಇದು ಧಾರ್ಮಿಕ ಅಶಿಸ್ತು ತೋರಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Previous Articleಪೊಲೀಸರಿಗೆ ಸಿಕ್ಕ ಸಿಹಿ ಸುದ್ದಿ ಏನು.?
Next Article ಸಿಎಂ ಬದಲಾವಣೆ ಬಾಯಿಚಪಲದ ಹೇಳಿಕೆ.