ಬೆಂಗಳೂರು,ಫೆ.14-
ಹಿಂದುಳಿದ ನೇಕಾರ ಸಮುದಾಯಗಳ ಅಭಿವೃದ್ದಿಗಾಗಿ ನೇಕಾರ ಅಭಿವೃದ್ದಿ ನಿಗಮ (Weavers’ Development Corporation) ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ನೇಕಾರ ಸಮುದಾಯಗಳ ಮಠಾಧೀಶರುಗಳು ಆಗ್ರಹಿಸಿದ್ದಾರೆ.
ಹಂಪೆ (Hampi)ಯ ಶ್ರೀ ದಯಾನಂದ ಪುರಿ ಸ್ವಾಮಿ, 1008 ಜಗದ್ಗುರು ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮಿ, ಶ್ರೀ ದಿವ್ಯ ಜ್ಞಾನಾನಂದಗಿರಿ ಸ್ವಾಮಿ , ಶ್ರೀ ಪ್ರಭುಲಿಂಗ ಸ್ವಾಮಿ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮಿ, ಶ್ರೀ ಘನಲಿಂಗ ಸ್ವಾಮಿ ಹಾಗೂ ಡಾ. ಈಶ್ವರಾನಂದ ಸ್ವಾಮಿ ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನೇಕಾರರ ಸಮುದಾಯಗಳ ಅಭಿವೃದ್ದಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದ ನೇಕಾರ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಬರುವ ಬಜೆಟ್‌ನಲ್ಲಿ 500 ಕೋಟಿ ರೂ ಅನುದಾನ ಮೀಸಲಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.
ರಾಜ್ಯದ 29 ಒಳಪಂಗಡಗಳ ಹೆಸರಿನಲ್ಲಿ ಗುರುತಿಸಿಕೊಂಡಿರುವ ನೇಕಾರ ಸಮುದಾಯದ ಜನಸಂಖ್ಯೆ 60 ಲಕ್ಷದಷ್ಟಿದ್ದು,ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು. ನೇಕಾರ ಸಮುದಾಯ ಹಾಗೂ ಸಮುದಾಯ ಅವಲಂಬಿಸಲಿರುವ ನೇಕಾರಿಕೆಯನ್ನು ಉಳಿಸಿಕೊಳ್ಳಲು ರಾಜಕೀಯ ಪ್ರಾತಿನಿಧ್ಯ ಬಹಳ ಅವಶ್ಯವಾಗಿರುವುದನ್ನು ರಾಜ್ಯ ಸರ್ಕಾರ ಗಮನಿಸಬೇಕು ಎಂದರು.
ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ಆಧರಿಸಿ ಮುಂಬರುವ Electionಯಲ್ಲಿ ರಾಜಕೀಯ ಪಕ್ಷಗಳು ನೇಕಾರ ಸಮುದಾಯಕ್ಕೆ ಕನಿಷ್ಠ 5 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನೇಕಾರರ ಒಕ್ಕೂಟದ ಮುಖಂಡರಾದ ಸೋಮಶೇಖರ್, ನೊಣವಿನಕೆರೆ ಲಿಂಗರಾಜು ಇನ್ನಿತರರಿದ್ದರು.