ಗದಗ, ನ.25- ಮದುವೆಯಾದ ವರ್ಷ ತುಂಬುವುದರೊಳಗೆ ಮಗುವಾದರೆ ಆ ಮನೆಯ ಹಿರಿಯ ಜೀವಕ್ಕೆ ಆಪತ್ತು ಎಂಬ ಮಾತನ್ನು ನಂಬಿದ ಅಜ್ಜಿಯೊಬ್ಬರು ತನ್ನ ಮೊಮ್ಮಗುವನ್ನು ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಒಂಬತ್ತು ತಿಂಗಳ ಹಸುಗೂಸಿಗೆ ಎಲೆ, ಅಡಿಕೆ ತಿನ್ನಿಸಿ ಅಜ್ಜಿ ಕೊಲೆ ಮಾಡಿರುವ ಸಂಶಯಾಸ್ಪದ ಘಟನೆ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮಗುವಿನ ತಾಯಿ ನಾಗರತ್ನ ಅತ್ತೆ ಸರೋಜಾ ವಿರುದ್ಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ತೆ ಸರೋಜಾನೇ ನನ್ನ ಮಗುವನ್ನು ಕೊಲೆ ಮಾಡಿದ್ದಾರೆ ಎಂದು ಸೊಸೆ ನಾಗರತ್ನ ಆರೋಪಿಸಿದ್ದಾರೆ.
ಹೆರಿಗೆಯಾದ 5 ತಿಂಗಳ ಬಳಿಕ ನಾಗರತ್ನ ಗಂಡನ ಮನೆಗೆ ಬಂದಿದ್ದರು. ಈ ವೇಳೆ ಅತ್ತೆ ಸರೋಜಾ “ಇಷ್ಟು ಬೇಗ ಮಗು ಬೇಕಿತ್ತಾ” ಅಂತ ಪ್ರಶ್ನೆ ಮಾಡಿದ್ದಾರೆ. ಇದೇ ಕೋಪದಲ್ಲಿ ಮಗುವಿಗೆ ಅಡಕೆ ಹೋಳು, ಎಲೆ ತಿನ್ನಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನವೆಂಬರ್ 22ರಂದು ಮಗುವಿನ ಅಂತ್ಯಸಂಸ್ಕಾರ ನೆರವೇರಿತ್ತು. ಈ ಬಳಿಕ ಮಗುವಿನ ತಾಯಿ ನಾಗರತ್ನ ದೂರು ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಮಗುವಿನ ಮೃತದೇಹ ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಗದಗ ಎಸಿ ವೆಂಕಟೇಶ ನಾಯಕ್, ಸಿಪಿಐ ಎಸ್ಎಸ್ ಬೀಳಗಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.