ಬೆಂಗಳೂರು, ಸೆ.27 – ನಗರದ ಕೆಲ ಸಾಫ್ಟ್‌ವೇರ್ ಕಂಪನಿಗಳ ಮೇಲೆ ಇಂದು ಮುಂಜಾನೆ ದಿಢೀರ್ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ(ಐಟಿ)ಯ ಅಧಿಕಾರಿಗಳು ದಾಖಲೆ ಪತ್ರಗಳ ಪರಿಶೀಲನೆ ಕೈಗೊಂಡಿದ್ದಾರೆ.
ನಗರದ 10ಕ್ಕೂ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳ ಮೇಲೆ ಮುಂಜಾನೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಿ ಶೋಧ ಮುಂದುವರೆಸಿದ್ದಾರೆ.
ನಗರದ ಸರ್ ಸಿ.ವಿ. ರಾಮನ್ ನಗರ, ಬಾಗಮನೆ ಟೆಕ್ ಪಾರ್ಕ್, ಹುಳಿಮಾವು ಮೊದಲಾದ ಕಡೆಗಳಲ್ಲಿ 10ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಹುಳಿಮಾವು ಸಮೀಪದ ಆಪಸ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ತಪಾಸಣೆಯನ್ನು ನಡೆಸುತ್ತಿದ್ದಾರೆ ಇದಲ್ಲದೆ ಇನ್ನೂ ಹಲವು ಕಡೆಗಳಲ್ಲಿ ದಾಳಿ ನಡೆದಿದ್ದು ನಿಖರವಾಗಿ ಮಾಹಿತಿ ಲಭ್ಯವಾಗಿಲ್ಲ.
ಆದಾಯ ತೆರಿಗೆ ಪಾವತಿಯಲ್ಲಿ ಕೆಲವು ಕಂಪನಿಗಳು ವಂಚನೆ ನಡೆಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಕಂಪನಿಯ ದಾಖಲೆ, ಕಡತಗಳ ಪರಿಶೀಲನೆಗಾಗಿ ಈ ದಾಳಿ ನಡೆಸಿದ್ದಾರೆ.
ತಂಡಗಳು ಕಂಪನಿಗಳ ಕಚೇರಿಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿವೆ. ಹಲವು ಖಾಸಗಿ ಕಂಪನಿಗಳು ಆದಾಯ ತೆರಿಗೆ ವಂಚನೆ ಮಾಡುವುದಕ್ಕಾಗಿ ಎರಡು ರೀತಿಯ ದಾಖಲೆ ನಿರ್ವಹಣೆ ಮಾಡುತ್ತಿರುವುದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಂಡುಕೊಂಡಿದ್ದರು. ಇದು ವಂಚನೆಯ ಪರಿಧಿಗೆ ಬರುತ್ತಿದ್ದು, ತೆರಿಗೆ ತಪ್ಪಿಸುವ ಹುನ್ನಾರವನ್ನು ಬಯಲು ಮಾಡಲು ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ದೊಡ್ಡ ದೊಡ್ಡ ಕಂಪನಿಗಳು ಕೂಡಾ ಈ ವಂಚನೆಯಲ್ಲಿ ಭಾಗಿಯಾಗಿವೆ ಎನ್ನಲಾಗಿದೆ.