ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಪ್ರಸ್ತುತ ಗೊಂದಲ ಉಂಟಾದ ಪರಿಣಾಮ ನಮ್ಮ ನಾಡು, ನುಡಿ, ಭಾಷೆಗಳಿಗೆ ಉಳಿಗಾಲವಿಲ್ಲದ ಪರಿಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು, ಪೋಷಕರು, ಮಕ್ಕಳು ಎಚ್ಚತ್ತುಕೊಳ್ಳಬೇಕಾಗಿದೆ. ಇದೊಂದು ಸ್ತ್ರೀ ವಿರೋಧಿ ಪಠ್ಯವಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆರ್‌ಎಸ್‌ಎಸ್‌ನ್ನು ಮುಂದಿಟ್ಟುಕೊಂಡು ಆಡಳಿತಕ್ಕೆ ಬಂದ ಬಿಜೆಪಿ ಸರಕಾರಕ್ಕೆ ಅದರದ್ದೇ ಆದ ಅಸ್ತಿತ್ವ, ಸ್ವಂತ ಶಕ್ತಿ, ಸ್ಪಷ್ಟ ನಿಲುವು, ಸಾಧನೆ ಇಲ್ಲ. ಇದರಿಂದ ಬಿಜೆಪಿಯ ನೈತಿಕತೆ, ಬುದ್ಧಿವಂತಿಕೆ ಏನೆಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲ, ಕೆಟ್ಟ ಶಬ್ದಗಳಿಂದ ಗಲಾಟೆ ಮಾಡುತ್ತಿದ್ದ, ನಾಡಿನ ಖ್ಯಾತ ಸಾಹಿತಿ ಕುವೆಂಪುರವರು ರಚಿಸಿದ ನಾಡಗೀತೆಯನ್ನು ವಿರೂಪುಗೊಳಿಸಿದ ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ದುರಾದೃಷ್ಟಕರ. ಪಠ್ಯ ಪರಿಷ್ಕರಣೆ ವೇಳೆ ಸ್ತ್ರಿ ಲೇಖಕರ ಒಂದೇ ಒಂದು ಪಾಠಗಳಾಗಲಿ, ಗದ್ಯಗಳಾಗಲಿ ಸೇರಿಸದೇ ಇದ್ದು, ಬಿಜೆಪಿಗೆ ಯಾಕೆ ಮಹಿಳೆಯರ ಬಗ್ಗೆ ಇಷ್ಟೊಂದು ತಾತ್ಸಾರ ಎಂದು ಪ್ರಶ್ನಿಸಿದ ಅವರು, ಇದು ಮಹಿಳೆಯರಿಗೆ ಮಾಡಿದ ದೊಡ್ಡ ಅವಮಾನ. ಅಲ್ಲದೆ ಹಿಂದುತ್ವದ ಕುರಿತು ಮಾತನಾಡುವ ಬಿಜೆಪಿ ಸರಕಾರದ ನಾರಾಯಣ ಗುರುಗಳ, ಕುವೆಂಪುರವರ ಕುರಿತು ಪಠ್ಯದಲ್ಲಿ ಯಾಕೆ ಸೇರಿಸಿಲ್ಲ. ಅವರು ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದ ಅವರು, ಕುಬೇರೆ ರಾಜ್ಯದಲ್ಲಿ ಇಲ್ಲದ ಹೊಸ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಯಾಕೆ ಅಳವಡಿಸಿದ್ದು. ಮೋದಿಯವರನ್ನು ಮೆಚ್ಚಿಸಲು ಈ ರೀತಿ ರಾಜ್ಯ ಬಿಜೆಪಿ ಸರಕಾರ ಮಾಡಿದೆ. ಈ ಕುರಿತು ಹೋರಾಟ ಮಾಡಿದವರನ್ನು ಜೈಲಿಗೆ ಅಟ್ಟುವ ಕೆಲಸ ಮಾಡುವ ಮೂಲಕ ಹೀನ ರಾಜಕೀಯಕ್ಕಿಳಿದಿದೆ ಎಂದು ಆರೋಪಿಸಿದರು.
ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಶೈಲಜಾ ಅಮರನಾಥ್ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ಗೊಂದಲದಿಂದ ಲೇಖಕರು, ದಾರ್ಶನಿಕರೇ ಬೀದಿಗಿಳಿಯುವ ಪರಿಸ್ಥಿತಿ ಉಂಟಾಗಿದೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಪಠ್ಯಪುಸ್ತಕ ಸಮಿತಿಯಲ್ಲಿ ಒಬ್ಬನೇ ಒಬ್ಬ ಮಹಿಳೆಯನ್ನು ಸೇರಿಸಿಲ್ಲ. ಬದಲಾಗಿ ಯಾವುದೇ ಅರ್ಹತೆ ಇಲ್ಲದ ಚಕ್ರತೀರ್ಥನನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಖಂಡನೀಯ. ಇದು ಪ್ರತಿಯೊಂದು ನಾಗರಿಕರನ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಲೇಖಕರ, ದಾರ್ಶನಿಕರ ಪರ ಧ್ವನಿಯಾಗಿ ನಿಂತಿದೆ ಎಂದು ಹೇಳಿದರು