ಶಿವಮೊಗ್ಗ
ರಾಜಕೀಯ ಸಭೆ, ಸಮಾರಂಭದಲ್ಲಿ ರಾಜಕೀಯ ನಾಯಕರು ಮಾಡುವ ಭಾಷಣಗಳು ವಿವಾದಗಳಿಗೆ ಇಲ್ಲವೇ ರಾಜಕೀಯ ಟೀಕೆಗಳಿಗೆ ಅಥವಾ ನೆರೆದ ಜನರನ್ನು ರಂಜಿಸುವುದಕ್ಕೆ ಸೀಮಿತವಾಗುತ್ತವೆ, ಎಲ್ಲೋ ಅಲ್ಲೊಮ್ಮೆ,ಇಲ್ಲೊಮ್ಮೆ ಕೆಲವರ ಭಾಷಣಗಳು ಪ್ರಬುದ್ಧತೆ ಹಾಗೂ ವಿಚಾರದ ಕಾರಣಕ್ಕೆ ಜನರ ಗಮನ ಸೆಳೆಯುತ್ತವೆ. ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ Congress ರಾಜ್ಯಾದ್ಯಂತ ಪ್ರಜಾಧ್ವನಿ ಬಸ್ ಯಾತ್ರೆ (Prajadhwani Yatre) ನಡೆಸುತ್ತಿದೆ. ಇದರಲ್ಲಿ ಮೊನ್ನೆ ಮೊನ್ನೆಯಷ್ಟೇ ಶಿವಮೊಗ್ಗದ ತೀರ್ಥಹಳ್ಳಿಯ (Thirthahalli, Shivamogga) ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಅವರ ಭಾಷಣ ಈಗ ಇಂತಹ ಸದ್ದು ಮಾಡುತ್ತಿದೆ. ಅವರ ಮಾತುಗಳಿಗೆ ಭಾರಿ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಹಾಗಾದರೆ ಅವರು ಏನು ಹೇಳಿದ್ದಾರೆ ನೋಡೋಣಾ ಬನ್ನಿ.
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ ನಾನು ಪಕ್ಷದ ಕಾರ್ಯಕರ್ತ. ಬೆಳಗಾವಿಯಲ್ಲಿ ಆರಂಭವಾದ ಪ್ರಜಾಧ್ವನಿ ಯಾತ್ರೆ, ಜಿಲ್ಲಾ ಕೇಂದ್ರ ಪ್ರವಾಸ ಮುಗಿಸಿ ತಾಲೂಕು ಕೇಂದ್ರಗಳಿಗೆ ಬಂದಿದೆ. ಸರ್ವಜ್ಞ ಒಂದು ಮಾತು ಹೇಳುತ್ತಾರೆ. ‘ನಿಂಬೆಗಿಂತ ಶ್ರೇಷ್ಠ ಹುಳಿ ಇಲ್ಲ, ದುಂಬಿಗೆ ಇರುವ ಕಪ್ಪು ಬಣ್ಣ ಅತ್ಯಂತ ಶ್ರೇಷ್ಠ, ದೇವರಲ್ಲಿ ಶಿವ ಶ್ರೇಷ್ಠ, ನಂಬಿಕೆಗಿಂತ ದೊಡ್ಡ ಗುಣವಿಲ್ಲ’ ಎಂದು ಹೇಳಿದ್ದಾರೆ. ಅದೇ ರೀತಿ ನಾನು ತೀರ್ಥಹಳ್ಳಿ ಜನರ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಬಂದಿದ್ದೇನೆ. ಇದುವರೆಗೂ ಮಾಡಿರುವ ಸಭೆಗಳಲ್ಲಿ ಇಂತಹ ಸೌಮ್ಯ, ತಾಳ್ಮೆ ಹಾಗೂ ಶಾಂತಯುತ ಸಭೆ ನೋಡಿರಲಿಲ್ಲ. ನಿಮ್ಮಲ್ಲಿ ಪ್ರಜ್ಞಾವಂತಿಕೆ ಎದ್ದು ಕಾಣುತ್ತಿದೆ.
ತೀರ್ಥಹಳ್ಳಿಯಲ್ಲಿ ನಾನಿಂದು ಶಾಂತವೇರಿ ಗೋಪಾಲಗೌಡರು (Shantaveri Gopala Gowda ), ಕಡಿದಾಳು ಮಂಜಪ್ಪ (Kadidal Manjappa), ಅನಂತಮೂರ್ತಿ (UR Ananthamurthy), ಕುವೆಂಪು (Kuvempu) ಅವರನ್ನು ಸ್ಮರಿಸಬೇಕು. ಈ ನಾಡನ್ನು ಕುವೆಂಪು ಅವರು ಶಾಂತಿಯ ತೋಟ ಎಂದಿದ್ದಾರೆ. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಇದೇ ಕಾರಣಕ್ಕೆ ನಾವು ಶಾಂತವೇರಿ ಗೋಪಾಲ ಗೌಡರು, ಕುವೆಂಪು, ಬಂಗಾರಪ್ಪ (S. Bangarappa ) , ಜೆ.ಹೆಚ್ ಪಟೇಲ್ (J H Patel) ಅವರನ್ನು ಸ್ಮರಿಸುತ್ತೇವೆ.

ನಾವು ಉತ್ತಮ ಆಡಳಿತ ನೀಡಿದ್ದರೂ ಜನ ನಮ್ಮನ್ನು ಬೆಂಬಲಿಸಲಿಲ್ಲ. ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿದೆವು. ನಾನು 40 ವರ್ಷ ಅವರ ಕುಟುಂಬದ ವಿರುದ್ಧ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದರೂ, ಈ ರಾಜ್ಯಕ್ಕಾಗಿ ಮೈತ್ರಿಸರ್ಕಾರಕ್ಕೆ ಬೆಂಬಲ ನೀಡಿ ಕೆಲಸ ಮಾಡಿದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಮಗೆ ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಕೆಲಸ ಮಾಡಿದೆವು. ಕುಮಾರಸ್ವಾಮಿ (HD Kumaraswamy) ಅವರು ಸರ್ಕಾರ ಉಳಿಸಿಕೊಳ್ಳಲಿಲ್ಲ. BJP ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿತು. ಅಧಿಕಾರಕ್ಕೆ ಬಂದ ನಂತರ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಚುನಾವಣೆಗೂ ಮುನ್ನ 600 ಭರವಸೆ ನೀಡಿದ್ದರು. 550 ಭರವಸೆ ಈಡೇರಿಸಿಲ್ಲ. ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ 165 ಭರವಸೆ ನೀಡಿ 159 ಭರವಸೆ ಈಡೇರಿಸಿದ್ದೇವೆ. ಪ್ರತಿನಿತ್ಯ ಅವರ ಭರವಸೆ ಬಗ್ಗೆ ನಾವು ಪ್ರಶ್ನೆ ಕೇಳುತ್ತಿದ್ದರೂ ಯಾವುದೇ ಉತ್ತರ ಸಿಗುತ್ತಿಲ್ಲ.
ಮೋದಿ (Narendra Modi) ಅವರು ಅಚ್ಛೇದಿನ ನೀಡುತ್ತೇವೆ ಎಂದರು. ಆದರೆ ನಿಮ್ಮ ಬದುಕಿನಲ್ಲಿ ಬದಲಾವಣೆ ತಂದರಾ? ನಿಮ್ಮ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದರು, ಕಪ್ಪು ಹಣವನ್ನು ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದರು. ಅವರು ಕೊಟ್ಟ ಮಾತಿನಂತೆ ಯಾವುದಾದರೂ ಕೆಲಸ ಮಾಡಿದ್ದಾರಾ?
ದೇವರು ವರವನ್ನೂ ನೀಡಲ್ಲ, ಶಾಪವನ್ನೂ ನೀಡಲ್ಲ. ಕೇವಲ ಅವಕಾಶ ನೀಡುತ್ತಾನೆ. ಆ ಅವಕಾಶ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಅರಗ ಜ್ಞಾನೇಂದ್ರ (Araga Jnanendra) ಅವರು ನಮ್ಮ ಕಾರ್ಯಕರ್ತರ ಮೇಲೆ ಕೇಸು ಹಾಕಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. PSI ನೇಮಕಾತಿಯಲ್ಲಿ OMR ಶೀಟ್ ತಿದ್ದಿ ಅಕ್ರಮ ಮಾಡಲಾಗಿದೆ. ಸದನದಲ್ಲಿ ಅಕ್ರಮವೇ ನಡೆದಿಲ್ಲ ಎಂದು ಸುಳ್ಳು ಹೇಳಿದರು. ತಪ್ಪು ನಡೆದಿಲ್ಲವಾದರೆ IPS ಅಧಿಕಾರಿ ಸೇರಿದಂತೆ ನೂರಕ್ಕೂ ಹೆಚ್ಚು ಜನ ಜೈಲು ಸೇರಿದ್ದು ಯಾಕೆ? ಯುವಕರ ಭವಿಷ್ಯದ ಜತೆ ಈ ಸರ್ಕಾರ ಚೆಲ್ಲಾಟವಾಡುತ್ತಿದೆ. ಅಧಿಕಾರಿಗಳನ್ನು ಜೈಲಿಗೆ ಹಾಕುವುದರ ಜತೆಗೆ ಇದಕ್ಕೆ ಕಾರಣರಾದ ಮಂತ್ರಿಗಳನ್ನು ಒಳಗೆ ಹಾಕಬೇಕು. ಈ ಸರ್ಕಾರದ ಅವಧಿ ಇನ್ನು 60 ದಿನ ಮಾತ್ರ. ನಂತರ ಜನ BJP ಯವರಿಗೆ ಗಂಟೂಮೂಟೆ ಕಟ್ಟಿ ಮನೆಗೆ ಕಳಿಸುತ್ತಾರೆ.
BJP ಯವರು ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ? ಜನ ಇವರನ್ನು ಮನೆಗೆ ಕಳಿಸುವ ಸಂಕಲ್ಪ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರೇ 40% ಕಮಿಷನ್ ನೀಡಬೇಕಿದೆ. ಬಿಜೆಪಿ ಕಾರ್ಯಕರ್ತ ಲಂಚ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಈಶ್ವರಪ್ಪ (KS Eshwarappa) ರಾಜೀನಾಮೆ ಕೊಟ್ಟರು. ಇಂತಹ ಘಟನೆ ಈ ಹಿಂದೆ ನಡೆದಿತ್ತಾ? ಈಶ್ವರಪ್ಪ ಅವರು ರಾಜೀನಾಮೆ ನೀಡುವ ಮುನ್ನವೇ ಅವರು ನಿರ್ದೋಷಿಯಾಗಿ ಬರುತ್ತಾರೆ ಎಂದು ಯಡಿಯೂರಪ್ಪನವರು ಹೇಳಿದರು.
ಶಿವಮೊಗ್ಗ ಅಭಿವೃದ್ಧಿ ಆಗಿದೆ ಎಂದು ಹೇಳುತ್ತಾರೆ. ಅಭಿವೃದ್ಧಿ ಆಗಿದ್ದರೆ, ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆಯಲ್ಲಿ 10 ಲಕ್ಷ ಕೋಟಿ ಬಂದಿದೆ ಎಂದರು. ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬಂಡವಾಳವೇ ಬಂದಿಲ್ಲ. ಈ ಬಂಡವಾಳ ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ ಈ ಸರ್ಕಾರ ಮಲೆನಾಡು, ಕರಾವಳಿ ಭಾಗದಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಸೃಷ್ಟಿಸಿ ರಾಜಕಾರಣ ಮಾಡುತ್ತಾರೆ. ಪೊಲೀಸರು ತಮ್ಮ ಸಮವಸ್ತ್ರ ತೆಗೆದು ಬೇರೆ ಬಟ್ಟೆ ಹಾಕಿಕೊಂಡು ಆಯುಧ ಪೂಜೆ ಮಾಡುತ್ತಾರೆ. ಜ್ಞಾನೇಂದ್ರ ಅವರೇ ನಿಮ್ಮ ಕಾಲದಲ್ಲಿ ಏನೆಲ್ಲಾ ಆಗುತ್ತಿದೆ? ನಾವು ಪ್ರಮಾಣ ವಚನ ಸ್ವೀಕರಿಸುವಾಗ ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುತ್ತೇವೆ ಎಂದು ಹೇಳುತ್ತೇವೆ. ಪ್ರಮಾಣ ತೆಗೆದುಕೊಂಡ ನಂತರ ಅದಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು.

ರೈತರ ವಿಚಾರದಲ್ಲಿ ಬಂಗಾರಪ್ಪ ಅವರ ಕಾಲದಲ್ಲಿ ಬಗರ್ ಹುಕುಂ (Bagar Hukum) ಸಾಗುವಳಿಗೆ ಅವಕಾಶ ನೀಡಿದೆವು. ಎಲ್ಲ ವರ್ಗದ ಜನರಿಗೂ ಜಮೀನು ಸಿಗಲಿಲ್ಲವೇ? ಅರಣ್ಯ ಹಕ್ಕು ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಿದ್ದುಪಡಿ ತಂದು ಎಲ್ಲ ಸಮುದಾಯದವರಿಗೂ 25 ವರ್ಷಗಳ ಮಿತಿಯನ್ನು ಕಡಿಮೆ ಮಾಡುತ್ತೇವೆ. ನಮ್ಮ ಪಕ್ಷ ಕರಾವಳಿ, ಮಲೆನಾಡು ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ನೀಡಲು ನಿರ್ಧರಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಈಗಾಗಲೇ ವಿಶೇಷ ಯೋಜನೆ ಘೋಷಣೆ ಮಾಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಕಾರ್ಯಕ್ರಮ ಘೋಷಿಸಿದ್ದೇವೆ.
ಈ ಸರ್ಕಾರದಲ್ಲಿ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಈ ಸರ್ಕಾರದಲ್ಲಿ 40% ಕಮಿಷನ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಹೇಳುತ್ತಾರೆ. ಯತ್ನಾಳ್ (Basavaraj Patil Yatnal) ಅವರು ಸಿಎಂ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ನೀಡಬೇಕು ಎಂದಿದ್ದಾರೆ. ಬಿಜೆಪಿ ಶಾಸಕರೇ ಆದ ಗೂಳಿಹಟ್ಟಿ ಶೇಖರ್ (Goolihatti Shekar), ನೀರಾವರಿ ಇಲಾಖೆಯಲ್ಲಿ 22 ಸಾವಿರ ಕೋಟಿ ಅಕ್ರಮದ ಬಗ್ಗೆ ಸಿಎಂಗೆ ದೂರು ನೀಡಿದ್ದಾರೆ.
ಈ ಸರ್ಕಾರ ಕಳೆದ ಮೂರುವರೆ ವರ್ಷಗಳಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರಲು ಯಾವುದಾದರೂ ಒಂದು ಕಾರ್ಯಕ್ರಮ ಮಾಡಿದ್ದರೆ ಅದನ್ನು ಘೋಷಿಸಲಿ. ಅವರು ಕೇವಲ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತಿದ್ದೇವೆ. ನಾವುಗಳು ಕೂಡ ಹಿಂದೂಗಳು. ನಮಗೆ ಮನುಷ್ಯತ್ವ, ಮಾನವೀಯತೆ ಮುಖ್ಯ. ಹೀಗಾಗಿ ನಾವು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು.
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ಈ ಕ್ಷೇತ್ರದಲ್ಲಿ ಇಬ್ಬರು ಟಿಕೆಟ್ ಗೆ ಅರ್ಜಿ ಹಾಕಿದ್ದಾರೆ. ಈ ಇಬ್ಬರನ್ನು ನಾವು ವಿಧಾನಸೌಧದಲ್ಲಿ ಕೂರುವಂತೆ ಮಾಡುತ್ತೇವೆ. ನೀವು ಒಗ್ಗಟ್ಟಾಗಿ ಕೆಲಸ ಮಾಡಿ. ನಾವು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೆ ನೀವು ಅವರ ಪರವಾಗಿ ಕೆಲಸ ಮಾಡಬೇಕು. ಅರಗ ಜ್ಞಾನೇಂದ್ರ ಅಡಿಕೆ ಬೆಳೆಯಬೇಡಿ ಎಂದು ಹೇಳುತ್ತೀರಾ? ನಮ್ಮಲ್ಲಿ ವಿಳ್ಯೆದೆಲೆ ಅಡಿಕೆ ಇಟ್ಟು ದೇವರಂತೆ ಕಾಣುತ್ತೇವೆ. ಇದು ನಮ್ಮ ಸಂಸ್ಕೃತಿ. ಇಂತಹ ಸಂಸ್ಕೃತಿಯ ಭಾಗವಾದ ಅಡಿಕೆಯನ್ನು ಬೇಡ ಎಂದು ಹೇಳುವ ನಿಮ್ಮ ಸಂಸ್ಕೃತಿ ಯಾವುದು?
ಆರಂಭದಲ್ಲಿ ಬೊಮ್ಮಾಯಿ (Basavaraj Bommai) ಅವರ ನಾಯಕತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿದರು. ಈಗ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಚುನಾವಣೆ ಮಾಡಿ ನಂತರ ಅವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ? ಡಬಲ್ ಇಂಜಿನ್ ಸರ್ಕಾರ ಬಂದರೆ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದರು. ಆದರೆ ಇಂದು ಪತ್ರಿಕೆಯಲ್ಲಿ ಬಂದಿರುವ ವರದಿಯಲ್ಲಿ ವಿಶೇಷ ಅನುದಾನದಲ್ಲಿ ರಾಜ್ಯಕ್ಕೆ ಸೊನ್ನೆ ಅನುದಾನ ಸಿಕ್ಕಿದೆ.
ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಪಾಪದ ಪುರಾಣವನ್ನು ಬಿಡುಗಡೆ ಮಾಡಿದ್ದೇವೆ. ಇದನ್ನು ನೀವು ಜನರಿಗೆ ತಿಳಿಸಿ. ಇನ್ನು ಈಗ 200 ಯುನಿಟ್ ವಿದ್ಯುತ್ ಉಚಿತ, ಆ ಮೂಲಕ ಇನ್ನು ಮುಂದೆ ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ಯಾರೂ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಇನ್ನು ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ.ಎಂದು ಹೇಳಿದರು.
ಬಿಜೆಪಿಯವರು ಮಾತೆತ್ತಿದರೆ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಈ ದೇಶದಲ್ಲಿ ಆಣೆಕಟ್ಟು, ಕೆರೆಗಳನ್ನು ಕಟ್ಟಿದ್ದು ಯಾರು? ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜು, ಐಐಟಿ, ಸಾರ್ವಜನಿಕ ಉದ್ದಿಮೆ ಆರಂಭಿಸಿದ್ದು ಕಾಂಗ್ರೆಸ್ ಪಕ್ಷ. ಸರಿ ಅಚ್ಛೇ ದಿನ ಕೊಡುತ್ತೇವೆ ಎಂದು ಹೇಳಿದಿರಲ್ಲಾ ನೀವು ಯಾವ ಕಾರ್ಯಕ್ರಮ ನೀಡಿದ್ದೀರಿ ಹೇಳಿ. ಈ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದೆ. ಇದರಿಂದ ರಾಜ್ಯಕ್ಕೆ ಭ್ರಷ್ಟ ರಾಜ್ಯ ಎಂಬ ಕಳಂಕ ಬಂದಿದೆ. ಇದನ್ನು ತೊಳೆದು ಹಾಕಬೇಕಿದೆ. ಹೀಗಾಗಿ ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಮರೆತು ಕೆಲಸ ಮಾಡಿ. ನಿಮ್ಮ ಸೇವೆ ಮಾಡಲು ನಮಗೆ ಶಕ್ತಿ ತುಂಬಿ ಎಂದು ಪ್ರಾರ್ಥಿಸುತ್ತೇನೆ ಎಂದರು.

