ಬೆಂಗಳೂರು,ಜ.26-
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಬೀಸುತ್ತಿದೆ. ಭ್ರಷ್ಟಾಚಾರ ಸೇರಿದಂತೆ ಹಲವು ವಿಷಯಗಳಲ್ಲಿ ಮತದಾರ BJP ವಿರುದ್ಧ ಬೇಸರಗೊಂಡಿದ್ದು, ಪ್ರತಿಪಕ್ಷ Congress ಪರ ಒಲವು ವ್ಯಕ್ತಪಡಿಸುತ್ತಿದ್ದಾನೆ. ಹೀಗಾಗಿ ಸರಳ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹಲವು ಸಮೀಕ್ಷೆಗಳು ಹೇಳುತ್ತಿವೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ವಿಧಾನಸಭೆಗೆ ಆರಿಸಿ ಬರಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಇವರಿಗೆ ಪ್ರತಿಪಕ್ಷಗಳ ಜೊತೆಗೆ ಸ್ವಪಕ್ಷದಲ್ಲೇ ಏರ್ಪಡುವ ಒಳ ಒಪ್ಪಂದಗಳು ಅಡ್ಡಿಯಾಗಬಹುದೆನ್ನುವ ಆತಂಕ ಕಾಡುತ್ತಿದೆ. ಹೀಗಾಗಿ ಇವರೆಲ್ಲರೂ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ.
ಪ್ರಮುಖವಾಗಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಈಗಾಗಲೇ ತಮಗೆ ಸುರಕ್ಷಿತ ಎಂದು ಕೋಲಾರದಿಂದ ಕಣಕ್ಕಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.ಆದರೆ, ಇದೂ ಕೂಡ ಅಂತಿಮವಾಗಿಲ್ಲ. ಈ ನಡುವೆ KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಅಧ್ಯಕ್ಷ ಡಾ.ಪರಮೇಶ್ವರ್ ಇದೀಗ ಬೇರೆ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಸಿದ್ದರಾಮಯ್ಯ ಅವರೊಂದಿಗೆ ಶಿವಕುಮಾರ್ ಮತ್ತು ಪರಮೇಶ್ವರ್ ಕೂಡ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ವಿಧಾನಸಭೆ Electionಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಅಲ್ಲದೆ ತಾವು ಸ್ಪರ್ಧಿಸಿದ ಕ್ಷೇತ್ರದ ಸುತ್ತಮುತ್ತ ತಮ್ಮ ಪ್ರಭಾವದಿಂದ ಮತ್ತಷ್ಟು Congress ಅಭ್ಯರ್ಥಿಗಳು ಗೆಲ್ಲಬೇಕು ಎಂಬ ಕಾರ್ಯತಂತ್ರ ರೂಪಿಸುತ್ತಿದ್ದಾರೆ. KPCC ಅಧ್ಯಕ್ಷರಾಗಿದ್ದ ವೇಳೆ ಪರಮೇಶ್ವರ್ ಕೊರಟಗೆರೆಯಲ್ಲಿ ಸೋಲು ಅನುಭವಿಸಿದ್ದರು. ಇವರ ಸೋಲಿಗೆ Congress ನ ಒಳ ಒಪ್ಪಂದವೇ ಕಾರಣ ಎಂದು ಆರೋಪಿಸಲಾಗಿತ್ತು. ಹೀಗಾಗಿ ಈ ಬಾರಿ ಅತ್ಯಂತ ಜಾಗರೂಕತೆಯಿಂದ ಹೆಜ್ಜೆಯಿಡಲು ಪರಮೇಶ್ವರ್ ಚಿಂತಿಸಿದ್ದಾರೆ.
ತಮ್ಮ ಸ್ವ ಕ್ಷೇತ್ರ ಕೊರಟಗೆರೆಯಲ್ಲಿ ಕೆಲವು ತಿಂಗಳಿಂದ ಬಿರುಸಿನ ಪ್ರವಾಸ ಮಾಡುತ್ತಿರುವ ಅವರು ಎಲ್ಲಾ ಸಮುದಾಯಗಳನ್ನು ಓಲೈಸುತ್ತಿದ್ದಾರೆ. ಆದರೂ ಇಲ್ಲಿ BJP ಯಿಂದ ಕಣಕ್ಕಿಳಿಯಲು ತಯಾರಿ ನಡೆಸಿರುವ ನಿವೃತ್ತ IAS ಅಧಿಕಾರಿ ಅನಿಲ್ ಕುಮಾರ್ ಮತ್ತು ಮಾಜಿ ಶಾಸಕ JDS ನ ಸುಧಾಕರ್ ಲಾಲ್ ತೀವ್ರ ಪೈಪೋಟಿ ಒಡ್ಡಿದ್ದಾರೆ. ಇದರ ನಡುವೆ ಸ್ವ ಪಕ್ಷೀಯರ ಒಳೇಟಿನ ಭೀತಿ ಕಾಡುತ್ತಿದೆ. ಹೀಗಾಗಿ ಸವಾಲು ಸ್ವೀಕರಿಸುವ ಬದಲಿಗೆ ನಿರಾಯಾಸವಾಗಿ ಆಯ್ಕೆಯಾಗುವ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ತಮ್ಮ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮುಳಬಾಗಿಲು ಮತ್ತು ಬೆಂಗಳೂರಿನ ಪುಲಿಕೇಶಿ ನಗರ ಕ್ಷೇತ್ರಗಳ ಕುರಿತು ತಮ್ಮದೇ ಲೆಕ್ಕಾಚಾರದ ಸಮೀಕ್ಷೆ ಪಡೆದುಕೊಂಡಿರುವ ಅವರು ಇದೀಗ ಮುಳಬಾಗಿಲು ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಕ್ಷೇತ್ರದಿಂದ ಪಕ್ಷೇತರರಾಗಿ ಆಯ್ಕೆಯಾಗಿರುವ ನಾಗೇಶ್ ಮೂಲತಃ ಕಾಂಗ್ರೆಸ್ ಕಾರ್ಯಕರ್ತ, ಅವರ ಜೊತೆ ತಮ್ಮ ಸ್ಪರ್ಧೆ ಸಂಬಂಧಿಸಿದಂತೆ ಮಾತುಕತೆ ನಡೆಸಿರುವ ಪರಮೇಶ್ವರ್, ಮಾಜಿ ಮಂತ್ರಿ ನಾಗೇಶ್ ಅವರನ್ನು ಮುಳಬಾಗಿಲು ಬದಲಿಗೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಸೂಚಿಸಿದ್ದಾರೆ.
ಮುಳಬಾಗಿಲಿನ ಹಾಲಿ ಶಾಸಕರಾಗಿರುವ ನಾಗೇಶ್ ಪರ ಅಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಪರಮೇಶ್ವರ್ ಆಪ್ತರಾಗಿರುವ ಇವರು ಇದೀಗ ತಮ್ಮ ನಾಯಕನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟು, ಮಹದೇವಪುರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಪರಮೇಶ್ವರ್ ಮಹದೇವಪುರದಲ್ಲಿ ಕೊಂಚ ಪ್ರಭಾವ ಹೊಂದಿದ್ದಾರೆ ಇದನ್ನು ಬಳಸಲು ನಾಗೇಶ್ ತೀರ್ಮಾನಿಸಿದ್ದಾರೆ. ಇನ್ನು ಮುಳಬಾಗಿಲು ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವ ಪರಮೇಶ್ವರ್ ಕೊರಟಗೆರೆಯಲ್ಲಿ ತಮ್ಮ ಆಪ್ತರಾದ ರಾಮಕೃಷ್ಣ ಇಲ್ಲವೆ ವಾಲೆ ಚಂದ್ರಯ್ಯ ಅವರನ್ನು ಕಣಕ್ಕಿಳಿಸಲಿದ್ದಾರೆ. ಈ ಮೂಲಕ ನಿರಾಯಾಸವಾಗಿ ತಾವು ಆಯ್ಕೆಯಾಗುವ ಜೊತೆಗೆ ತಮ್ಮ ಆಪ್ತವಲಯವನ್ನು ಆಯ್ಕೆ ಮಾಡಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಅದೇ ರೀತಿ ಡಿ.ಕೆ.ಶಿವಕುಮಾರ್ ಅವರೂ ಕೂಡ ತಮ್ಮ ಸಾಂಪ್ರದಾಯಿಕ ಕನಕಪುರ ಕ್ಷೇತ್ರದ ಬದಲಿಗೆ ನೆರೆಯ ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ.
ಈ ಚುನಾವಣೆಯಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯಲು ಅವರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ, ಈ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಒಕ್ಕಲಿಗ ಮತಬೇಟೆಗೆ ತಂತ್ರ ಹೆಣೆಯುತ್ತಿದ್ದಾರೆ. ಒಂದು ವೇಳೆ ಮದ್ದೂರಿನಲ್ಲಿ ಸ್ಪರ್ಧೆ ಮಾಡಿದರೆ ಅತೀ ಹೆಚ್ಚು ಒಕ್ಕಲಿಗ ಮತಗಳು ಇರುವ ಮಂಡ್ಯ ಜಿಲ್ಲೆಯ ಇತರೆ ಕ್ಷೇತ್ರಗಳಲ್ಲೂ ಅವರು ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಮದ್ದೂರಿನಲ್ಲಿ ಸ್ಪರ್ಧೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಅಲ್ಲದೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದು ಇಲ್ಲಿಂದಲೇ ಎಂಬ ಲೆಕ್ಕಾಚಾರವಿದೆ. ಹೀಗಾಗಿ ಇಲ್ಲಿಂದ ಸ್ಪರ್ಧೆ ಮಾಡಿದರೆ ಅವರ ಬೆಂಬಲ ಸಿಗಲಿದೆ ಎಂಬ ವಿಶ್ವಾಸದಲ್ಲಿರುವ ಶಿವಕುಮಾರ್ ಇಲ್ಲಿಯ ತಮ್ಮ ಸ್ಪರ್ಧೆ ನೆರೆಯ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕನಕಪುರದಿಂದ ತಮ್ಮ ಅಳಿಯ ಹಾಗೂ ಎಸ್. ಎಂ.ಕೃಷ್ಣ ಅವರ ಮೊಮ್ಮಗ ಅಮಾರ್ತ್ಯ ಹೆಗಡೆ ಇಲ್ಲವೇ ತಮ್ಮ ಪುತ್ರಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಈ ಚುನಾವಣೆ ಕಾಂಗ್ರೆಸ್ ನಿಂದ ಅಚ್ಚರಿಯ ಸ್ಪರ್ಧೆಗಳ ಲೆಕ್ಕಾಚಾರಗಳಿಗೆ ವೇದಿಕೆಯಾಗಲಿದೆ.