ಬೆಂಗಳೂರು,ಏ.15- ರಾಜ್ಯದಲ್ಲಿ ಜನರ ವಿಶ್ವಾಸ ಗಳಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು, ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ಇದೀಗ, ಆಡಳಿತ ರೂಡ ಬಿಜೆಪಿಯ ಭಿನ್ನಮತದ ಲಾಭ ಪಡೆಯಲು ಮುಂದಾಗಿದೆ.
ಟಿಕೆಟ್ ಹಂಚಿಕೆ ಸೇರಿದಂತೆ ಹಲವಾರು ವಿಷಯಗಳಲ್ಲಿ, ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಪ್ರಭಾವಿ ನಾಯಕರು, ಮತ್ತು ಪ್ರಮುಖ ಕಾರ್ಯಕರ್ತರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ .ಇದರ ಸಂಪೂರ್ಣ ಜವಾಬ್ದಾರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ವಹಿಸಿದ್ದಾರೆ.
ಈ Electionಯನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿರುವ ಖರ್ಗೆ ಅವರು, ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ಸಂದೇಶ ರವಾನಿಸಬೇಕೆಂದು ತೀರ್ಮಾನಿಸಿದ್ದು ,ಇದಕ್ಕಾಗಿ ಅಗತ್ಯವಿರುವ ಯಾವುದೇ ನಿರ್ಧಾರ ಕೈಗೊಳ್ಳಲು ಶಿವಕುಮಾರ್ ಅವರಿಗೆ ಮುಕ್ತ ಅವಕಾಶ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎ ಐ ಸಿ ಸಿ ಇಂದ ತಮಗೆ ಸ್ಪಷ್ಟ ಸಂದೇಶ ಹಾಗೂ ಮುಕ್ತ ಸ್ವಾತಂತ್ರ ಸಿಕ್ಕ ಬೆನ್ನೆಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಹಸ್ಯ ಸ್ಥಳದಲ್ಲಿ ಕುಳಿತು ಆಪರೇಷನ್ ಹಸ್ತ ಕಾರ್ಯಚರಣೆಯನ್ನು ಚುರುಕುಗೊಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಬಿಜೆಪಿ ಭದ್ರಕೋಟೆಯನ್ನು ಛೇದಿಸಲು ವ್ಯೂಹ ರಚಿಸಿರುವ ಡಿ.ಕೆ.ಶಿವಕುಮಾರ್ ಪ್ರಭಾವಿ ನಾಯಕರಿಗೆ ಗಾಳ ಹಾಕಿದ್ದಾರೆ ಅದರಲ್ಲೂ ಕಿತ್ತೂರು ಕರ್ನಾಟಕ ಭಾಗದಲ್ಲಿನ ಪ್ರಭಾವಿ ನಾಯಕರನ್ನು ಕಾಂಗ್ರೆಸ್ ಗೆ ಕರೆತರಲು ಶಿವಕುಮಾರ್ ತಂತ್ರ ರೂಪಿಸಿದ್ದಾರೆ.
ಕೆಲವು ನಾಯಕರು ಕಾಂಗ್ರೆಸ್‍ಗೆ ಬರಲು ಹಿಂದೇಟು ಹಾಕಿದರೆ ಅಂತಹವರು ಪಕ್ಷೇತರರಾಗಿ ಸ್ಪರ್ಧೀಸಿದರೆ ಅವರಿಗೆ ಬೆಂಬಲ ಘೋಷಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಪಕ್ಷೇತರರಾಗಿ ಆಯ್ಕೆಯಾದವರ ಬೆಂಬಲ ಕಾಂಗ್ರೆಸ್‍ಗೆ ಲಾಭವಾಗಬಹುದು ಎಂಬ ಲೆಕ್ಕಾಚಾರಗಳೂ ಪಕ್ಷದಲ್ಲಿ ನಡೆಯುತ್ತಿವೆ.
ನಾಮಪತ್ರ ಸಲ್ಲಿಕೆಗೆ ಐದು ದಿನಗಳು ಬಾಕಿ ಇವೆ. ಅಷ್ಟರಲ್ಲಿ ಎಷ್ಟು ಮಂದಿ ಸಾಧ್ಯವೋ ಅಷ್ಟು ಜನರನ್ನು ಕಾಂಗ್ರೆಸ್‍ಗೆ ಸೆಳೆಯಲು ಯತ್ನಗಳು ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಹೈಕಮಾಂಡ್ ಮತ್ತು ಅನ್ಯ ಪಕ್ಷಗಳ ಅಸಮಧಾನಿತರ ಜೊತೆ ಸಂಪರ್ಕ ನಡೆಸುತ್ತಿದ್ದಾರೆ.