ಬೆಂಗಳೂರು,ಫೆ.24- ಅಧಿಕಾರಿಗಳ ವರ್ಗಾವಣೆ ಅನುದಾನ ಹಂಚಿಕೆ ಹಾಗೂ ನಿಗಮ ಮಂಡಳಿ ನೇಮಕಾತಿ ವಿಷಯದಲ್ಲಿ ಕೆಲವು ಶಾಸಕ ಮತ್ತು ಮಂತ್ರಿಗಳ ಅಸಮಾಧಾನಕ್ಕೆ ಗುರಿಯಾಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದೀಗ ಎಲ್ಲರ ವಿಶ್ವಾಸ ಗಿಟ್ಟಿಸಲು ಪ್ರಯತ್ನ ಆರಂಭಿಸಿದ್ದಾರೆ ಮುಂಬರುವ ಲೋಕಸಭೆ ಹಾಗೂ ರಾಜ್ಯಸಭೆ Election ಹಿನ್ನೆಲೆಯಲ್ಲಿ ಪಕ್ಷದ ಬಲಾಬಲ ಕ್ರೋಡೀಕರಣದ ಹೆಸರಲ್ಲಿ ಅವರು ಕಳೆದ ರಾತ್ರಿ ಸಚಿವರಿಗೆ ಭೋಜನಕೂಟ ಆಯೋಜಿಸಿದ್ದರು.
8 ಜನ ಸಚಿವರನ್ನುಹೊರತುಪಡಿಸಿದರೆ ಉಳಿದ ಎಲ್ಲರೂ ನಿನ್ನೆಯ ಭೋಜನಕೂಟದಲ್ಲಿ ಭಾಗವಹಿ ಸಿದ್ದರು. ಈ ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಮಹತ್ವದ ಚರ್ಚೆಯಾಗಿದೆ.
ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿ ಸಚಿವರ ಅಭಿಪ್ರಾಯಕ್ಕೆ ಮಾನ್ಯತೆ ನೀಡಲಾಗುವುದು ಮಂತ್ರಿಗಳ ಸಲಹೆ ಮೇರೆಗೆ ಚುನಾವಣಾ ರಣತಂತ್ರ ಹೆಣೆಯಲಾಗುವುದು ತಾವು ಸೂಚಿಸಿದ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಲಿದೆ ಹೀಗಾಗಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಮಂತ್ರಿಗಳಿಗೆ ಶಿವಕುಮಾರ್ ಹೇಳಿದರೆನ್ನಲಾಗಿದೆ.
ಕೆಲವು ಕ್ಷೇತ್ರಗಳಲ್ಲಿ 2-3 ಕ್ಕಿಂತಲೂ ಹೆಚ್ಚಿನ ಅಭ್ಯರ್ಥಿಗಳಿದ್ದಾರೆ. ಹೀಗಾಗಿ ಅವರ ನಡುವೆ ಚರ್ಚೆ ನಡೆಸಿ ಯಾವುದೇ ಅಸಮಾಧಾನಕ್ಕೆ ಅವಕಾಶವಿಲ್ಲದಂತೆ ಸೌಹಾರ್ದಯುತವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಿಮ್ಮ ಜವಾಬ್ದಾರಿಯಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರು ಚುನಾವಣಾ ಹೊಣೆಗಾರಿಕೆ ಒಪ್ಪಿಕೊಳ್ಳಬೇಕು. ರಾಜ್ಯಮಟ್ಟದಲ್ಲಿ ಅಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ. ಹೀಗಾಗಿ ಹೈಕಮಾಂಡ್‍ನ ಸಂದೇಶದನುಸಾರ ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕು. ಆಂತರಿಕವಾಗಿ ಸಣ್ಣಪುಟ್ಟ ಭಿನ್ನಮತಗಳಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದೆಂದು ಸಲಹೆ ನೀಡಲಾಗಿದೆ.
ಬಿಜೆಪಿ ಅನುಸರಿಸುತ್ತಿರುವ ರಾಜಕೀಯ ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸುವುದು ಅತ್ಯಗತ್ಯ. ಸುಳ್ಳು ಮತ್ತು ಭಾವನಾತ್ಮಕ ರಾಜಕಾರಣಕ್ಕೆ ಎಲ್ಲಾ ಸಚಿವರೂ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಸಚಿವರಿಗೆ ಸಲಹೆ ಕೊಡಲಾಗಿದೆ.
ಮಂತ್ರಿಗಳ ಸ್ಪರ್ಧೆ:
ಇನ್ನು ಈ ಸಭೆಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್,
ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರ ನೇತೃತ್ವದಲ್ಲಿ ನಡೆದ ಭೋಜನಾಕೂಟದಲ್ಲಿ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆಗಳಾಗಿವೆ ಎಂದರು. ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಒಂದು ಬಾರಿ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆಯಾಗಿದೆ. 2ನೇ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗುತ್ತದೆ. ಸಚಿವರ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ನಿನ್ನೆಯ ಸಭೆಯಲ್ಲಿ ಇಂತಹ ಯಾವುದೇ ವಿಷಯ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್.ಪಿ.ಮುದ್ದಹನುಮೇಗೌಡ ಮರು ಸೇರ್ಪಡೆಗೆ ಯಾರಿಗೂ ಅಸಮಾಧಾನವಿಲ್ಲ. ಶಾಸಕರಾದ ಷಡಾಕ್ಷರಿ, ಟಿ.ಬಿ.ಜಯಚಂದ್ರ ಅವರು ಎಸ್.ಪಿ.ಮುದ್ದಹನುಮೇಗೌಡರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು ಎಂದ ಮಾತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಸರಿಯಲ್ಲ. ಪಕ್ಷ ತೀರ್ಮಾನ ಮಾಡಿದ ಮೇಲೆ ನಾವೆಲ್ಲಾ ಕೆಲಸ ಮಾಡಲೇಬೇಕಿದೆ ಎಂದು ತಿಳಿಸಿದರು. ರಾಜ್ಯಸಭಾ ಚುನಾವಣೆಯಲ್ಲಿ ಯಾರು, ಯಾರಿಗೆ ಮತ ಹಾಕಬೇಕು ಎಂಬುದನ್ನು ರಾಜ್ಯನಾಯಕರು ನಿರ್ಧರಿಸಿ ಶಾಸಕರಿಗೆ ಸೂಚನೆ ನೀಡಲಿದ್ದಾರೆ. ಅದರಂತೆ ಮತದಾನ ನಡೆಯಲಿದೆ ಎಂದರು.