
ಬೆಂಗಳೂರು: ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಮಾತೃಭಾಷೆ ಮರೆತವನು ತನ್ನ ಸಂಸ್ಕೃತಿ ಉಳಿಸಲಾರ. ಹಾಗಾಗಿ ಮುಂದಿನ ಪೀಳಿಗೆಗೆ ಅರೆಭಾಷಿಕರ ಸಂಸ್ಕೃತಿ, ಆಚಾರ, ವಿಚಾರಗಳನ್ನು ದಾಟಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ 2024ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಂದು ಸಮಾಜ ಅಕ್ಷರ ಮರೆತರೆ ಕಲಿಸಬಹುದು. ಆದರೆ ಕಲೆ, ಸಂಸ್ಕೃತಿ ಮರೆತರೆ ಮತ್ತೆ ಕಲಿಸುವುದಕ್ಕೆ ಸಾಧ್ಯವಿಲ್ಲ. ನಮ್ಮ ಹುಟ್ಟು ಸಾವಿನ ಮಧ್ಯದಲ್ಲಿ ಮನುಷ್ಯ ಏನು ಸಾಧನೆ ಮಾಡುತ್ತಾನೆ ಎನ್ನುವುದು ಮುಖ್ಯ” ಎಂದು ಹೇಳಿದರು.
ಜಗತ್ತಿನಲ್ಲಿ 7 ಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಅದರಲ್ಲಿ ಸುಮಾರು 2,845 ಭಾಷೆಗಳು ಕಣ್ಮರೆ ಆಗಿವೆ. ಅರೆಭಾಷೆ ಯಾವುದೇ ಕಾರಣಕ್ಕೂ ಕಣ್ಮರೆ ಆಗದಂತೆ ನೀವೆಲ್ಲರೂ ಕಾಪಾಡಿಕೊಳ್ಳಬೇಕು. ಬೆಂಗಳೂರಿನಲ್ಲಿ ಸಾಕಷ್ಟು ಜನ ಬೇರೆ ಭಾಷಿಕರು ಇದ್ದಾರೆ. ಕೊಡಗಿನಲ್ಲೂ ಇದ್ದಾರೆ. ಬಿಹಾರ, ಅಸ್ಸಾಂ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂಲ ನಿವಾಸಿಗಳು ಬೇರೆ ಕಡೆ ಹೋದಾಗ ಬೇರೆಯವರು ಬಂದು ಆಕ್ರಮಿಸುತ್ತಾರೆ. ವ್ಯವಸಾಯ ಕಾರಣಕ್ಕೆ ಈ ರೀತಿಯ ವಲಸೆ ಹೆಚ್ಚಾಗಿದೆ. ಆದರೆ ನಾವು ಸಂಸ್ಕೃತಿಯನ್ನು ಮರೆಯಬಾರದು ಎಂದು ಹೇಳಿದರು.
ನಿಮ್ಮ ಜನಸಂಖ್ಯೆ ಕೇವಲ 4 ಲಕ್ಷ ಮಾತ್ರವಿದೆ ಎಂದು ಹಿಂಜರಿಕೆ ಬೇಡ. ಒಂದು ಪಬುದ್ಧ ನಾಯಕತ್ವ ಅಥವಾ ತೀರ್ಮಾನ ನಿಮ್ಮನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ನಾಯಕನಾದವನಿಗೆ ಲಕ್ಷಾಂತರ ಜನ ಹಿಂಬಾಲಕರು ಬೇಡ. ಧೈರ್ಯ ಹಾಗೂ ತೀರ್ಮಾನ ಬೇಕು. ನಿಮ್ಮ ಜನಸಂಖ್ಯೆ ಕಡಿಮೆ ಇದ್ದರೂ ಅನೇಕರು ದೊಡ್ಡ ಸ್ಥಾನಕ್ಕೆ ಹೋಗಿಲ್ಲವೇ? ಕೇವಲ ನಾಯಕತ್ವ ಎಂದರೆ ರಾಜಕೀಯ ಮಾತ್ರವಲ್ಲ. ಔದ್ಯೋಗಿಕ, ಶಿಕ್ಷಣ, ಸಾಹಿತ್ಯ, ಸಂಗೀತ ಹೀಗೆ ಅನೇಕ ಕ್ಷೇತ್ರದಲ್ಲಿ ಅರೆಭಾಷಿಕರು ಸಾಧನೆ ಮಾಡಿದ್ದಾರೆ” ಎಂದರು.

