‘ಕೇರಳಂ ಹಾಗೂ ಪುದುಚೆರಿ ರಾಜ್ಯಗಳು ಇಂದು ನಿರುದ್ಯೋಗ ಹಾಗೂ ಬೆಲೆ ಏರಿಕೆ ಸಮಸ್ಯೆಯಿಂದ ತತ್ತರಿಸಿವೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಸರ್ಕಾರವು ದಕ್ಷ ಆಡಳಿತದ ಮೂಲಕ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲಿದೆ. ನಿಮ್ಮ ಬದುಕನ್ನು ಹಸನುಗೊಳಿಸುವ ಈ ಸುವರ್ಣ ಅವಕಾಶ ಈಗ ನಿಮ್ಮ ಮುಂದೆ ಒದಗಿ ಬಂದಿದ್ದು, ಇದನ್ನು ಸರಿಯಾಗಿ ಬಳಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ’ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು. ಭಾನುವಾರ ಪುದುಚೇರಿಯ ಮಾಹೆ ವಿಧಾನಸಭೆ ಕ್ಷೇತ್ರ ಹಾಗೂ ಕೇರಳಂನ ಒರ್ಕಟ್ಟೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಎಂದರು. ನಮ್ಮ ನಂಬಿಕೆ ಇರುವುದು ಈ ದೇಶದ ಸಂವಿಧಾನ, ಕಾಂಗ್ರೆಸ್ ಪಕ್ಷದ ಭವ್ಯ ಇತಿಹಾಸ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಮೇಲೆ ಇದ್ದು, ದಕ್ಷಿಣ ಭಾರತದ ರಾಜ್ಯದವರು ಸಹೋದರರಂತೆ ಒಂದಾಗಿ ದೇಶದ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಹೇಳಿದರು. ಇಂದು ಕೇರಳಂ ಹಾಗೂ ಪುದುಚೆರಿಯಲ್ಲಿ ಎದುರಾಗಿರುವ ಪರಿಸ್ಥಿತಿಯೇ ಮೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿತ್ತು; ಅಂದು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ತಮ್ಮನ್ನು ಅಧ್ಯಕ್ಷನನ್ನಾಗಿ ನೇಮಿಸಿದಾಗ, ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಅಧಿಕಾರಕ್ಕೆ ಬಂದೆವು ಹಾಗೂ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಕರ್ನಾಟಕದ ಜನರನ್ನು ರಕ್ಷಣೆ ಮಾಡಿದ್ದೇವೆ ಎಂದು ನೆನಪಿಸಿದರು.
ಇದೇ ವೇಳೆ ಧಾರ್ಮಿಕ ಶ್ರದ್ಧೆಯ ಬಗ್ಗೆ ಮಾರ್ಮಿಕ ಪ್ರಶ್ನೆಯೊಂದನ್ನು ಎತ್ತಿದ ಅವರು, ಮೊದಲು ಸ್ವಾಮಿ ಅಯ್ಯಪ್ಪನಿಗೆ ನಮಿಸುವುದಾಗಿ ತಿಳಿಸಿದರು. ಇಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯದ ಚಿನ್ನ ಕಳ್ಳತನವಾಗಿದೆ, ತಮ್ಮ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲದಿದ್ದರೂ, ಅಹ್ಮದ್ ಪಟೇಲ್ ಅವರ ಆಯ್ಕೆ ವೇಳೆ ಶಾಸಕರನ್ನು ರಕ್ಷಿಸಿದ್ದಕ್ಕೆ ತಮ್ಮನ್ನು ಜೈಲಿಗೆ ಹಾಕಲಾಯಿತು, ಆದರೆ ಇಲ್ಲಿ ಅಯ್ಯಪ್ಪ ಸ್ವಾಮಿಯ ಚಿನ್ನ ಕಳ್ಳತನವಾಗಿದ್ದರೂ ಇಡಿ ಅಥವಾ ಸಿಬಿಐನಿಂದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಸಮಾಜದ ಎಲ್ಲಾ ವರ್ಗ ಮತ್ತು ಧರ್ಮವನ್ನು ಗೌರವಿಸುವ ಕಾರಣಕ್ಕೆ ಈ ನೆಲವನ್ನು ದೇವರ ನಾಡು ಎನ್ನುತ್ತೇವೆ, ಆದರೆ ದೇವರಿಗೇ ನ್ಯಾಯ ಸಿಗದಿದ್ದರೆ, ಇನ್ನು ಸಾಮಾನ್ಯ ಜನರಿಗೆ ನ್ಯಾಯ ಸಿಗುವುದೇ ಎಂದು ಆತಂಕ ವ್ಯಕ್ತಪಡಿಸಿದರು.
ಕೇರಳ ಮತ್ತು ಪುದುಚೇರಿಯ ಹಾಲಿ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಸಿಎಂ, ಪುದುಚೆರಿಯಲ್ಲಿ ರಂಗಸ್ವಾಮಿ ಹಾಗೂ ಕೇರಳದಲ್ಲಿ ಎಲ್ ಡಿಎಫ್ ಸುದೀರ್ಘವಾಗಿ ಆಡಳಿತ ನಡೆಸಿವೆ, ಆದರೆ ಕಳೆದ ಹತ್ತು ವರ್ಷಗಳಲ್ಲಿ ಇವರು ಮಾಡಿರುವ ಯಾವುದಾದರೂ ಒಂದು ಅಭಿವೃದ್ಧಿ ಕಾರ್ಯ ನಿಮ್ಮ ಕಣ್ಣಿಗೆ ಕಾಣುತ್ತಿದೆಯೇ, ನಿಮ್ಮ ಬದುಕನ್ನು ಬದಲಿಸಿದ ಯೋಜನೆ ಯಾವುದಾದರೂ ಇದೆಯೇ ಎಂದು ಸಾರ್ವಜನಿಕರನ್ನು ಕೇಳಿದರು. ಎಲ್ ಡಿಎಫ್ ಸರ್ಕಾರವು ಕೊಚ್ಚಿನ್ ಮೆಟ್ರೋ, ಕನ್ನೂರು ಹೆದ್ದಾರಿಯಂತಹ ಅಭಿವೃದ್ಧಿ ಯೋಜನೆಗಳನ್ನೇ ವಿರೋಧಿಸಿದೆ ಎಂದ ಅವರು, ದೇವರು ವರ ಅಥವಾ ಶಾಪ ನೀಡುವುದಿಲ್ಲ, ಕೇವಲ ಅವಕಾಶ ನೀಡುತ್ತಾನೆ, ಆ ಅವಕಾಶವನ್ನು ಬಳಸಿ ಉದ್ಯೋಗ ಸೃಷ್ಟಿಸುವಲ್ಲಿ ಎಲ್ ಡಿಎಫ್ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಹೊರದೇಶದಲ್ಲಿರುವ ಭಾರತೀಯರ ಮತದಾನದ ಹಕ್ಕಿನ ಬಗ್ಗೆ ಪ್ರಸ್ತಾಪಿಸಿದ ಅವರು, ಕೋವಿಡ್ ಸಮಯದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜನರನ್ನು ರಕ್ಷಿಸಿದ್ದು ಕಾಂಗ್ರೆಸ್ ಸರ್ಕಾರ ಎಂದರು. ಇಂದು ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ನಮ್ಮ ಸಹೋದರರು ಇಲ್ಲಿಗೆ ಬಂದು ಮತ ಹಾಕಲು ಇಚ್ಛಿಸುತ್ತಿದ್ದಾರೆ, ಆದರೆ ಕೇಂದ್ರ ಸರ್ಕಾರ ಅವರಿಗೆ ಮತದಾನ ಮಾಡಲು ಸರಿಯಾದ ಅವಕಾಶ ಕಲ್ಪಿಸಿಕೊಡುತ್ತಿಲ್ಲ, ಇದು ಕೇಂದ್ರದ ದೊಡ್ಡ ವೈಫಲ್ಯ ಎಂದು ದೂರಿದರು. ಈ ದೇಶವನ್ನು ಮತ್ತು ಈ ರಾಜ್ಯದ ಇತಿಹಾಸವನ್ನು ಕಾಪಾಡಲು ಕೇವಲ ಕಾಂಗ್ರೆಸ್ ಮೈತ್ರಿಕೂಟದಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಭಾರಿ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ಕೇರಳದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಯುಡಿಎಫ್ ಕಾರ್ಯಕರ್ತರು ಈ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭೇಟಿಯು ಕೇರಳ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದ್ದು, ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದೆ. ಒಟ್ಟಾರೆ, ಡಿ.ಕೆ. ಶಿವಕುಮಾರ್ ಅವರ ಕೇರಳ ಭೇಟಿ ಈ ಬಾರಿಯ ಚುನಾವಣಾ ಫಲಿತಾಂಶದ ಮೇಲೆ ಮಹತ್ವದ ಪರಿಣಾಮ ಬೀರುವ ಮುನ್ಸೂಚನೆ ನೀಡಿದೆ.

