ಹಾಸನ,ಜೂ.8-ನಟೋರಿಯಸ್ ರೌಡಿ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ನಾಲ್ವರು ಕೊಲೆಗಾರರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರೀತಮ್ (27), ಕೀರ್ತಿ(26), ರಂಗನಾಥ್ ಅಲಿಯಾಸ್ ರಂಗ(26) ಹಾಗೂ ಅಮಿತ್ ಆಲಿಯಾಸ್ ಅಮ್ಮಿ (31) ಬಂಧಿತ ಆರೋಪಿಗಳಾಗಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದ ಮಾರನೇ ದಿನ ನೀರು ತರಲೆಂದು ಹೋಗಿದ್ದ ರೌಡಿ ಚೈಲ್ದ್ ರವಿಯನ್ನು ಕಾರಿನಲ್ಲಿ ಬಂದು ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನು ಕೊನೆಗೂ ನಗರದ ಹೊರವಲಯದ ಗ್ಯಾರಳ್ಳಿ ಬಳಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ಕಳೆದ ಜೂ. 5ರ ಮುಂಜಾನೆ 7 ಗಂಟೆ 50 ನಿಮಿಷಕ್ಕೆ ರೌಡಿ ಶೀಟರ್ ರವಿಕುಮಾರ್ ಅಲಿಯಾಸ್ ಚೈಲ್ಡ್ ರವಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮೃತ ರೌಡಿಶೀಟರ್ ಎರಡು ಕೊಲೆ ಸೇರಿ ಏಳು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಇತ್ತ ಈಗಾಗಲೇ ಮೂರು ಕೊಲೆ ಮಾಡಿ ಜೈಲಿಗೆ ಹೋಗಿ ಬಂದಿದ್ದ ಪ್ರೀತಮ್ ಹಾಗೂ ರವಿ ನಡುವೆ ಹಾಸನದಲ್ಲಿ ಡಾನ್ ಪಟ್ಟಕ್ಕಾಗಿ ಪೈಪೋಟಿ ಶುರುವಾಗಿತ್ತು. ಇದೇ ವಿಚಾರಕ್ಕೆ ರವಿ ಕೊಂದರೆ ತಾನೇ ಡಾನ್ ಆಗುತ್ತೇನೆ ಎಂದು ಪ್ರೀತಮ್ ಹೇಳಿಕೊಂಡಿದ್ದ. ಅದರಂತೆ ಆತನನ್ನು ಕೊಲೆ ಮಾಡಲು ಸ್ಕೇಚ್ ಹಾಕಿ ತನ್ನ ಸಹಚರರೊಂದಿಗೆ ಜೂ.5ರಂದು ಬೆಳ್ಳಂ ಬೆಳಗ್ಗೆ ಬಂದು ಚೈಲ್ಡ್ ರವಿಯನ್ನು ಹತ್ಯೆಮಾಡಿದ್ದರು.
ಚೈಲ್ಡ್ ರವಿ ಹಿನ್ನೆಲೆ:
ಹಾಸನದಲ್ಲಿ ನಟೋರಿಯಸ್ ರೌಡಿಯಾಗಿದ್ದ 45ರ ಹರೆಯದ ರವಿ ಅಲಿಯಾಸ್ ಚೈಲ್ಡ್ ರವಿ ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದ. ಹಾಗಾಗಿಯೇ ಇವನಿಗೆ ಚೈಲ್ಡ್ ರವಿ ಎಂದು ಹೆಸರು ಬಂದಿದೆ ಎನ್ನುವ ಮಾತುಗಳಿವೆ.
Previous Articleಸೋಲಿನ ಬಗ್ಗೆ ರಾಜ್ಯನಾಯಕರಿಗೆ ವರದಿ ಕೇಳಿದ ರಾಹುಲ್ ಗಾಂಧಿ.
Next Article ಪೋರ್ಷೆ ಅಪ್ರಾಪ್ತ ಆರೋಪಿ ತಂದೆಯ ರೆಸಾರ್ಟ್ ನೆಲಸಮ.