ಬೆಂಗಳೂರು,ಜೂ.6-ಮದ್ಯದ ಅಮಲಿನಲ್ಲಿ ನೆರೆ ಹೊರೆಯವರ ನಡುವೆ ಆರಂಭವಾದ ಜಗಳವು ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ನಿನ್ನೆ ರಾತ್ರಿ ಪುಲಕೇಶಿನಗರದ ಕೆಎಚ್‌ಬಿ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ.
ಕೆಎಚ್‌ಬಿ ಕಾಲೋನಿಯ ಪ್ರಶಾಂತ್ (24) ಕೊಲೆಯಾದವರು. ಕೃತ್ಯ ನಡೆಸಿ ಪರಾರಿಯಾಗಿರುವ ನೆರೆಮನೆ ನಿವಾಸಿ ಅರ್ಜುನ್ (26) ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಮದ್ಯಪಾನ ಮಾಡಿಕೊಂಡು ರಾತ್ರಿ ಮನೆಗೆ ಬಂದಿದ್ದ ಪ್ರಶಾಂತ್ ಸುಖಾಸುಮ್ಮನೆ ಮೀನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಬೆದರಿಸುತ್ತಿದ್ದನು. ಅದೇ ಸಮಯದಲ್ಲಿ ಮೀನು ಖರೀದಿಸಲು ಬಂದಿದ್ದ ಆರೋಪಿ ಅರ್ಜುನ್ ‘ನಾನು ಮೀನು ಖರೀದಿಸಲು ಬರುವಾಗ, ಮೀನು ಮಾರಾಟ ಮಾಡುವವನಿಗೆ ಬೆದರಿಸುತ್ತೀಯಾ?’ ಎಂದು ಜಗಳ ತೆಗೆದಿದ್ದಾನೆ.
ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು, ಒಬ್ಬರಿಗೊಬ್ಬರು ನಿಂದಿಸಿದ್ದರು. ಆಕ್ರೋಶಗೊಂಡ ಅರ್ಜುನ್ ಮನೆಯಲ್ಲಿದ್ದ ಚಾಕುವಿನಿಂದ ಪ್ರಶಾಂತ್ ಎದೆಯ ಭಾಗಕ್ಕೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಪ್ರಶಾಂತ್ ಮೃತಪಟ್ಟಿದ್ದಾನೆ.
ಪ್ರಶಾಂತ್ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದು ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಪುಲಕೇಶಿ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.