ಬೆಂಗಳೂರು,ಸೆ.13- ಮಾದಕವಸ್ತು ಮಾರಾಟ ಸರಬರಾಜು ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ರೈಲಿನ ಮೂಲಕ ಗಾಂಜಾ ಕಳ್ಳ ಸಾಗಾಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿ 5 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಂಪೇಗೌಡ ನಗರ ಪೊಲೀಸರು ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸಿ 2 ಕೋಟಿ ಮೌಲ್ಯದ 506 ಕೆಜಿ ಗಾಂಜಾ ವಶಪಡಿಸಿಕೊಂಡರೆ, ಜಯನಗರ ಪೊಲೀಸರು 3 ಕೋಟಿ ರೂ. ಮೌಲ್ಯದ 50 ಕೆಜಿ ಗಾಂಜಾ, 6 ಕೆಜಿ ಆಶಿಶ್ ಆಯಿಲ್‍ನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ ಅವರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೆಂಪೇಗೌಡ ನಗರ ಪೊಲೀಸರು ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನವಾಜ್‍ಪಾಶ, ನೂರ್ ಅಹ್ಮದ್, ಶ್ರೀಮತಿ ಮುಬಾರಕ್, ಇಮ್ರಾನ್‍ಪಾಷ, ಕಿರಣ್ ಅಲಿಯಾಸ್ ಬಂಗಾರಪ್ಪನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಕೆಂಪಾಂಬುದಿ ಕೆರೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಕೆಂಪೇಗೌಡ ನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಒರಿಸ್ಸಾದ ಮಲ್ಕಾನ್‍ಗಿರಿಯಿಂದ ಗಾಂಜಾವನ್ನು ಕಳ್ಳಸಾಗಾಣಿಕೆ ಮಾಡಿಕೊಂಡು ಬಂದು ಕೆಂಗೇರಿಯ ಮನೆಯೊಂದರಲ್ಲಿ ಶೇಖರಿಸಿಟ್ಟಿದ್ದರು.
ಮನೆಯ ಮೇಲೆ ದಾಳಿ ನಡೆಸಿ 500 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು. ಆರೋಪಿಗಳು 10 ರಿಂದ 25 ಕೆಜಿ ತೂಕದ ಲಗೇಜ್ ಬ್ಯಾಗ್‍ನಲ್ಲಿ ಗಾಂಜಾವನ್ನು ಸುಗಂದದ್ರವ್ಯ ಬಳಸಿ, ವಾಸನೆ ಗೊತ್ತಾಗದಂತೆ ತುಂಬಿಕೊಂಡು ರೈಲಿನ ಸೀಟುಗಳಡಿ ಇಟ್ಟುಕೊಂಡು ಸಾಗಾಣೆ ಮಾಡುತ್ತಿದ್ದರು.
ಬಂಧಿತ ಆರೋಪಿಗಳು ಹಲವು ದಿನಗಳಿಂದ ಗಾಂಜಾವನ್ನು ಭುವನೇಶ್ವರದಿಂದ ಕಳ್ಳಸಾಗಾಣಿಕೆ ಮಾಡಿಕೊಂಡು ಬಂದು ಮಾರಾಟ ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಿದರು.
ಜಯನಗರ ಪೊಲೀಸರು ಅಶೀಶ್ ಅಯಿಲ ಹಾಗೂ ಗಾಂಜಾ ಮಾರಾಟಮಾಡುತ್ತಿದ್ದ ನಯಾಜ್‍ಪಾಷ, ಸಾಗರ್‍ತಾಹೊ ಹಾಗೂ ಶೇಷಗಿರಿ ಸೇರಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 20 ಲಕ್ಷ ಮೌಲ್ಯದ 50 ಕೆಜಿ ಗಾಂಜಾ, 2.80 ಲಕ್ಷ ಮೌಲ್ಯದ 6 ಕೆಜಿ ಆಶಿಶ್ ಆಯಿಲ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಗಾಂಜಾ ಪ್ರಕರಣದಲ್ಲಿ ಹಿಂದೆ ಬಂಧಿತನಾಗಿದ್ದ ಆರೋಪಿ ನಯಾಜ್‍ಪಾಷ ನೀಡಿದ ಮಾಹಿತಿಯಾಧರಿಸಿ ಆಂಧ್ರಪ್ರದೇಶದ ಶ್ರೀಕಾಕೊಳಂಗೆ ತೆರಳಿದ್ದ ಜಯನಗರ ಮಂಜುನಾತ್ ಅವರ ತಂಡ ಇನ್ನಿಬ್ಬರನ್ನು ಬಂಧಿಸಿ ಕಾರ್ಯಾಚರಣೆ ಕೈಗೊಂಡಿದೆ ಎಂದು ತಿಳಿಸಿದರು.
ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರ ನೇತೃತ್ವದಲ್ಲಿ ಜಯನಗರ ಹಾಗೂ ಕೆಂಪೇಗೌಡ ನಗರ ಪೊಲೀಸರ ವಿಶೇಷ ತಂಡಗಳು ಕಾರ್ಯಾಚರಣೆ ಕೈಗೊಂಡು ಬೃಹತ್ ಪ್ರಮಾಣದ ಮಾದಕವಸ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್‍ಪಾಟೀಲ್, ಡಿಸಿಪಿ ಕೃಷ್ಣಕಾಂತ್ ಅವರಿದ್ದರು
Previous Articleವಿಧಾನಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ
Next Article ಅಜ್ಜಿ ತನ್ನ ಗಂಡನ ವಿರುದ್ಧ ಕೊಟ್ಟ ದೂರು ಎನು ಗೊತ್ತಾ?