ಬೆಂಗಳೂರು,ಅ.22- ನಗರದ ಚರ್ಚ್ ಸ್ಟ್ರೀಟ್‌ನಲ್ಲಿರುವ (Church Street) ಬರ್ಗರ್ ಸೈನೆರ್ ಪಬ್ ನಲ್ಲಿ ಯುವತಿಯರನ್ನು ಚುಡಾಯಿಸಿದ್ದಕ್ಕೆ ಯುವಕ-ಯುವತಿಯರ ಮಧ್ಯೆ ಜೋರು ಗಲಾಟೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಲೇಜು ಯುವಕರು ಹಾಗೂ ಯುವತಿಯರು ರಾತ್ರಿ ಪಬ್‌ನಲ್ಲಿ ಪಾರ್ಟಿ ಮುಗಿಸಿಕೊಂಡು ಹೋಗುವಾಗ ಗಲಾಟೆ ನಡೆದಿದೆ. ಕೆಲ ಯುವಕರು ಯುವತಿಯರನ್ನು ಚುಡಾಯಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ, ಯುವತಿಯರು ಯುವಕರಿಗೆ ಬೈದಿದ್ದಾರೆ.
ಇದೇ ವೇಳೆ ಯುವತಿಯರ ಗೆಳೆಯರು ಹಾಗೂ ಚುಡಾಯಿಸಿದ ಯುವಕರ ಮಧ್ಯೆ ತಳ್ಳಾಟ, ನೂಕಾಟ ನಡೆದಿದೆ. ಯುವತಿಯರು ಕೂಡ ಯುವಕರನ್ನು ತಳ್ಳುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ರಸ್ತೆ ಬಳಿಯೇ ಎರಡೂ ಗುಂಪುಗಳು ಹೊಡೆದಾಡಿಕೊಂಡಿದ್ದು, ಕುಡಿದ ಮತ್ತಿನಲ್ಲಿ ರಂಪಾಟ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಯುವಕನೊಬ್ಬ ಗಾರ್ಡನ್ ಏರಿಯಾದಲ್ಲಿ ಬಿದ್ದಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕ ಹಾಗೂ ಯುವತಿಯರ ರಂಪಾಟದ ವಿಡಿಯೊ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಡರಾತ್ರಿವರೆಗೆ ಪಾರ್ಟಿ ಮಾಡಿ, ಕುಡಿದ ಮತ್ತಿನಲ್ಲಿ ಹೀಗೆ ಮಾಡುವುದು ಅಸಭ್ಯತನದ ಪರಮಾವಧಿ ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಯುವತಿಯರನ್ನು ಅಸಭ್ಯ ಪದಗಳಿಂದ ನಿಂದಿಸಿರುವ ಯುವಕರ ನಡೆಯ ಕುರಿತು ಕೂಡ ಆಕ್ರೋಶ ವ್ಯಕ್ತವಾಗಿದೆ. ಆದಾಗ್ಯೂ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪಬ್ ಸಿಬ್ಬಂದಿಯು ಜಗಳ ಬಿಡಿಸಿ, ಅವರನ್ನು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.