ಬೆಂಗಳೂರು – ವಿಧಾನಸಭೆ Election ಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪಣ ತೊಟ್ಟಿರುವ ಬಿಜೆಪಿ ಇದಕ್ಕೆ ಅನುಕೂಲಕರವಾದ ಎಲ್ಲಾ ತೀರ್ಮಾನ ತೆಗೆದುಕೊಳ್ಳತೊಡಗಿದೆ.
ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪಕ್ಷದ ಮುಖಂಡ,ಯಾದವ ಸಮುದಾಯದ ಪ್ರಮುಖ ನಾಯಕ ಹಾಗೂ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರ ಉಚ್ಚಾಟನೆ ಆದೇಶ ಹಿಂಪಡೆಯಲಾಗಿದೆ.
ಒಳ ಮೀಸಲಾತಿ ಗೊಂದಲ ಸೇರಿದಂತೆ ಹಲವು ಕಾರಣದಿಂದ ಹಿಂದುಳಿದ ಸಮುದಾಯ ಬಿಜೆಪಿ ಪರವಾಗಿಲ್ಲ ಎಂಬ ವರದಿಗಳಿಂದ ಬೆಚ್ಚಿರುವ ಹೈಕಮಾಂಡ್ ಇದೀಗ ಈ ಸಮುದಾಯಗಳನ್ನು ಒಲೈಸತೊಡಗಿದೆ.ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯದ ಮುಖಂಡ ಹಾಗೂ ಯಾದವ ಸಮುದಾಯದ ಪ್ರಭಾವಿ ನಾಯಕ ಶ್ರೀನಿವಾಸ್ ಗೆ ಮಣೆ ಹಾಕಿದೆ.
ಪಕ್ಷದ ಬಗ್ಗೆ ತಾವು ತೋರಿದ ಬದ್ದತೆ,ನಡವಳಿಕೆ ಹಾಗೂ ಉಚ್ಚಾಟನೆ ಆದೇಶದ ಕುರಿತು ತಾವು ನೀಡಿದ ಉತ್ತರ ಗಮನಿಸಿ ಉಚ್ಚಾಟನೆ ಆದೇಶ ಹಿಂಪಡೆಯಲಾಗಿದೆ ಎಂದು ಪಕ್ಷದ ಶಿಸ್ತು ಸಮಿತಿ ತನ್ನ ಆದೇಶದಲ್ಲಿ ತಿಳಿಸಿದೆ.
ಕಳೆದ ಎರಡೂವರೆ ವರ್ಷಗಳ ಹಿಂದೆ ಪಕ್ಷದ ಸೂಚನೆ ಕಡೆಗಣಿಸಿ, ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದಿಂದ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಎಂದು ಆರೋಪಿಸಿ ಡಿ.ಟಿ.ಶ್ರೀನಿವಾಸ್ ಅವರನ್ನು ಬಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶ್ರೀನಿವಾಸ್ ಅವರು ಕಣದಿಂದ ಹಿಂದಕ್ಕೆ ಸರಿಯುವಂತೆ ತಿಳಿಸಿದ್ದರೂ ಪಕ್ಷದ ಸೂಚನೆ ಕಡೆಗಣಿಸಿ, ಮುಜುಗರಕ್ಕೆ ಕಾರಣರಾಗಿದ್ದಾರೆ. ಆದ್ದರಿಂದ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಉಚ್ಚಾಟನೆ ಆದೇಶದಲ್ಲಿ ತಿಳಿಸಲಾಗಿತ್ತು.ಇದೀಗ ಇದೇ ಶಿಸ್ತು ಸಮಿತಿ ತನ್ನ ಆದೇಶ ವಾಪಸ್ ಪಡೆದಿದೆ.