ಬೆಂಗಳೂರು, ಜೂ.8-ನಕಲಿ ದಾಖಲಾತಿ ಸೃಷ್ಟಿಸಿ ನಿವೇಶನಗಳನ್ನು ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಿದ್ದ ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು
ಯಶಸ್ವಿಯಾಗಿದ್ದಾರೆ. ರೇಣುಗೋಪಾಲ್(49) ವರ್ಷ, (ನಕಲಿ ಕೆ.ವೇಣುಗೋಪಾಲ್), ಗೌರಮ್ಮ(48) (ನಕಲಿ ಟಿ.ಜಯಲಕ್ಷ್ಮಿ), ಶಂಕರ್( 44) (ನಕಲಿ ಟಿ.ನಾಗರಾಜ), ಎಂ.ಪ್ರಕಾಶ್(50) ಹಾಗು ಶಾಂತರಾಜು(43)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ. ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಬಂಧಿತರ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್‍ಗಳ ನಕಲು ಪ್ರತಿಗಳನ್ನು ಹಾಗು ನೊಂದಾಯಿತ ಕಾಗದ ಪತ್ರಗಳ ನಕಲು ಪ್ರತಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಯಲಹಂಕದ ಚಿಕ್ಕಬೆಟ್ಟಹಳ್ಳಿ ಗ್ರಾಮದ ವಿಂಗಡಿಸಿರುವ ಶ್ರೀ ಸಾಯಿ ಲೇಔಟ್ ನ ನಂ.56ನೇ ನಿವೇಶನವನ್ನು 2015ನೇ ಸಾಲಿನಲ್ಲಿ ಡಾ.ಎನ್.ಗಿರಿ ಮತ್ತು ಡಾ. ಶ್ರೀಮತಿ ಗಿರಿ ರವರಿಂದ ಕಾರ್ತಿಕ.ಬಿ.ಎಸ್ ಅವರ ಹೆಸರಿಗೆ ಕ್ರಯ ಪತ್ರವಾಗಿತ್ತು. ಈ ಸ್ವತ್ತಿಗೆ ಸಂಬಂದಿಸಿದಂತೆ ಆರೋಪಿಗಳು ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಮಾರಾಟ ಮಾಡಿರುವ ಬಗ್ಗೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೈಗೊಂಡ ತನಿಖೆಯಲ್ಲಿ ನಕಲಿ ಟಿ.ನಾಗರಾಜ್ ಮತ್ತು ನಕಲಿ ಟಿ.ಜಯಲಕ್ಷ್ಮೀ ಅವರು ನಕಲಿ ಕೆ.ವೇಣುಗೋಪಾಲ್ ಗೆ ಕಳೆದ 2016 ಜೂ.6 ರಂದು ದಾನ ಪತ್ರ ಮಾಡಿರುವುದಾಗಿ, ನಕಲಿ ಕೆ.ವೇಣುಗೋಪಾಲ್ 2019ರ ಜೂ.17 ರಂದು ಭಾಸ್ಕರ.ಬಿ ರವರಿಗೆ ಕ್ರಯ ಪತ್ರ ಮಾಡಿಕೊಟ್ಟಿರುತ್ತಾರೆ. ಭಾಸ್ಕರ್.ಬಿ ಅವರು ವಿ.ಮುನಿಲಕ್ಷ್ಮಮ್ಮ ಮತ್ತು ಎನ್.ಕುಶಾಲ್ ಗೆ 2020 ಆಗಸ್ಟ್ 12 ರಂದು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದಲ್ಲಿ ನಕಲಿ ಕೆ.ವೇಣುಗೋಪಾಲ್ ನನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ ಈತನ ನಿಜವಾದ ಹೆಸರು ರೇಣುಗೋಪಾಲ್ ಬಸವೇಶ್ವರನಗರ ಮುಖ್ಯರಸ್ತೆಯ ಅಗ್ರಾಹಾರ ದಾಸರಹಳ್ಳಿ ಎನ್ನುವುದಾಗಿತ್ತು. ಈತನನ್ನು ಹೆಚ್ಚಿನ ವಿಚಾರಣೆ ನಡೆಸಿ ಪ್ರಕರಣದ ಮುಖ್ಯ ಸೂತ್ರದಾರ ಈತನ ಸ್ನೇಹಿತನಾದ ರಾಜಾಜಿನಗರದ ಇಂಡಸ್ಟ್ರೀಯಲ್ ಟೌನ್ ನ ಎಂ.ಪ್ರಕಾಶ್ ಬಂಧಿಸಲಾಯಿತು.
ಬಂಧಿತ ಪ್ರಕಾಶ್ ಆಟೋ ಕನ್ಸಲ್‍ಟೆಂಟ್ ಕೆಲಸ ಮಾಡಿಕೊಂಡಿದ್ದು ಈತ ಸ್ನೇಹಿತನಾದ ವಿದ್ಯಾರಣ್ಯಪುರದ ಎ.ಎಂ.ಎಸ್. ಲೇಔಟ್ ನ ಶಾಂತರಾಜು ಎಂಬಾತ ವರ್ಷಗಳಿಂದ ಖಾಲಿ ಇರುವ ನಿವೇಶನಗಳನ್ನು ಹುಡುಕಿ, ಅಕ್ಕಪಕ್ಕ ವಿಚಾರ ಮಾಡಿ ವಾರಾಸುದಾರರು ಸುಮಾರು ವರ್ಷಗಳಿಂದ ಜಾಗಕ್ಕೆ ಬರುತ್ತಿಲ್ಲವೆಂದು ತಿಳಿದು ಸಬ್ ರಿಜಿಸ್ಟರ್ ಕಛೇರಿಗಳಿಂದ ನೋಂದಾಯಿತ ಪ್ರತಿಗಳನ್ನು ಪಡೆದುಕೊಂಡು ನಿವೇಶನದ ಮಾಲೀಕರ ಹೆಸರುಗಳಲ್ಲಿ ಅಸಲಿ ವ್ಯಕ್ತಿಗಳ ಬದಲಿಗೆ ನಕಲು ವ್ಯಕ್ತಿಗಳನ್ನು ತೋರಿಸಿ ಸಬ್ ರಿಜಿಸ್ಟರ್ ಕಛೇರಿಗಳಲ್ಲಿ ದಾನಪತ್ರ ಮಾಡಿಕೊಂಡು ಸೃಷ್ಟಿಸಿಕೊಂಡು ಸ್ವತ್ತನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿ ಅಕ್ರಮ ಸಂಪಾದನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.
ಪ್ರಮುಖ ಆರೋಪಿಗಳಾದ ರೇಣುಗೋಪಾಲ್ ಅಲಿಯಾಸ್ ಕೆ.ವೇಣುಗೋಪಾಲ್ ಕೆಂಗೇರಿ ಪೊಲೀಸ್ ಠಾಣಾ ಸರಹದ್ದಿನ ನಿವೇಶನವೊಂದಕ್ಕೆ ನಖಲು ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಅಕ್ರಮವೆಸಗಿದ್ದು ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ. ಆರೋಪಿಗಳ ಬಂಧನದಿಂದ 2 ಪ್ರಕರಣಗಳು ಪತ್ತೆಯಾಗಿದ್ದು ವಿದ್ಯಾರಣ್ಯಪುರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್‍ಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.