ಬೆಂಗಳೂರು, ಮಾ.25- ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಹಣ, ಮದ್ಯ, ಉಡುಗೊರೆಗಳನ್ನು ನೀಡುವ ಮೂಲಕ ಅಕ್ರಮವೆಸಗಲು ರಾಜಕೀಯ ನಾಯಕರು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ ಅವುಗಳನ್ನು ಪೊಲೀಸರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಯಶಸ್ವಿಯಾಗಿ ಪತ್ತೆ ಹಚ್ಚಿ ಅಕ್ರಮ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ.
ಹೀಗಾಗಿ ಅಕ್ರಮವೆಸಗಲು ರಾಜಕೀಯ ನಾಯಕರು ಹೊಸ ಹೊಸ ಹಾದಿ ಹುಡುಕುತ್ತಿದ್ದಾರೆ ಇದೀಗ ರೈಲುಗಳ ಮೂಲಕ ಚುನಾವಣೆಯಲ್ಲಿ ಅಕ್ರಮವೆಸಗಲು ಹಣ ಮತ್ತು ವಸ್ತುಗಳನ್ನು ಸಾಗಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಆಯೋಗ ಮುಂದಾಗಿದೆ.
ರೈಲ್ವೇ ಪೊಲೀಸರು ಆರ್ಪಿಎಫ್ ಮತ್ತು ರೈಲ್ವೆ ಪೊಲೀಸರು ಚುನಾವಣಾ ಚೆಕ್ ಪೋಸ್ಟ್ ನಿರ್ಮಿಸಿ ರಾಜ್ಯಾದ್ಯಂತ ಹೊರ ರಾಜ್ಯದಿಂದ ಬರುವ ರೈಲ್ವೆ ಬೋಗಿಗಳ ತಪಾಸಣೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ ರೈಲ್ವೆ ನಿಲ್ದಾಣಗಳಲ್ಲಿಯೂ ಪ್ರತಿಯೊಬ್ಬರ ಲಗೇಜ್ ಪರಿಶೀಲನೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆ ಪೊಲೀಸರು ಮದ್ಯ ಹಾಗು ಹಣ ಸಾಗಾಣೆ ಬಗ್ಗೆ ಕಟ್ಟೆಚ್ಚರ ವಹಿಸಿದ್ದಾರೆ. ಇಪ್ಪತ್ತು ತಂಡಗಳನ್ನಾಗಿ ಮಾಡಿಕೊಂಡಿದ್ದು, ಒಂದೊಂದು ತಂಡದಲ್ಲಿ ಐದು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಸೂಚನೆ ಹಿನ್ನಲೆ ಅಲರ್ಟ್ ಆಗಿದ್ದು ಬೋಗಿಗಳಲ್ಲಿ ಬರುವ ಲಗೇಜ್, ಪ್ಯಾಕಿಂಗ್ ಗಳು ಹಾಗೂ ಅನುಮಾನಿತರ ಮೇಲೆ ನಿಗಾ ಇಡಲಾಗುತ್ತಿದೆ. ಆರ್ಪಿಎಫ್ ತಂಡದ ಜೊತೆ ಶ್ವಾನದಳವೂ ಕಾರ್ಯ ನಿರ್ವಹಿಸುತ್ತಿದೆ.
ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ರೈಲ್ವೆ ನಿಲ್ದಾಣಗಳಲ್ಲಿ ತೀವ್ರ ನಿಗಾ ವಹಿಸಿದ್ದು ದುಡ್ಡು ಸಾಗಾಣೆ, ಅನಧಿಕೃತ ಮಧ್ಯ ಸೇರಿದಂತೆ ದಾಖಲೆ ಇಲ್ಲದೇ ತಗೆದುಕೊಂಡು ಹೋಗುವ ಯಾವುದೇ ವಸ್ತುಗಳ ಮೇಲೆ ಚೆಕ್ ಪೋಸ್ಟ್‌ಗಳ ಮೂಲಕ ಹದ್ದಿನ ಕಣ್ಣಿರಿಸಲಾಗಿದೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಚೆಕ್ ಪೋಸ್ಟ್ ತೆರೆದಿದ್ದು, ಅಧಿಕಾರಿಗಳು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

