ಮತ್ತೊಮ್ಮೆ ವಿಶ್ವದ ಅತ್ಯಂತ ಶ್ರೀಮಂತ ಸ್ಥಾನಕ್ಕೆ ಏರಿದ ಎಲಾನ್ ಮಸ್ಕ್. ಟ್ವಿಟ್ಟರ್ ಸಂಸ್ಥೆಯ ಖರೀದಿ ಮುಂತಾದ ಕೆಲವು ವ್ಯವಹಾರಗಳಿಂದ ಬಹಳಷ್ಟು ನಷ್ಟ ಅನುಭವಿಸಿದ್ದ ಚಾಣಾಕ್ಷ ಉದ್ಯಮಿ ಎಲಾನ್ ಮಸ್ಕ್ ಬಹಳ ದಿನಗಳ ಕಾಲ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲೇ ಉಳಿದುಕೊಂಡಿದ್ದರು. ಟ್ವಿಟರ್ ಖರೀದಿಯ ಕಾರಣದಿಂದ ಮಸ್ಕ್ ಬಹಳಷ್ಟು ಹಣ ಕಳೆದುಕೊಂಡಿದ್ದಾರೆ ಮತ್ತು ಅವರಿನ್ನೆಂದೂ ವಿಶ್ವದ ಅತ್ಯಂತ ಶ್ರೀಮಂತನಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿತ್ತು.
ಆದರೆ ತಮ್ಮ ವಿಚಿತ್ರ ವ್ಯವಹಾರ ಕೌಶಲ್ಯಕ್ಕೆ ಹೆಸರಾಗಿರುವ ಮಸ್ಕ್ ಈಗ ಮತ್ತೊಮ್ಮೆ ಬ್ಲೂಮ್ ಬರ್ಗ್ ಇಂಡೆಕ್ಸ್ ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ಸ್ಥಾನಕ್ಕೆ ಏರಿದ್ದಾರೆ. ಇವರ ಈ ಸಾಧನೆಗೆ ಕಾರಣ ಇವರ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾ ವೇ ಹೊರತು ಬೇರೆ ಯಾವ ವ್ಯವಹಾರವೂ ಅಲ್ಲ ಎಂದು ಹೇಳಲಾಗಿದೆ. ಸದ್ಯಕ್ಕೆ 187 ಬಿಲಿಯನ್ ಮೌಲ್ಯದ ಸಂಪತ್ತು ಹೊಂದಿರುವ ಎಲಾನ್ ಮಸ್ಕ್ ನೂರು ಬಿಲಿಯನ್ ಗಳಿಗಿಂತ ಅಧಿಕ ಸಂಪತ್ತು ಹೊಂದಿರುವ ವಿಶ್ವದ ಕೆಲವೇ ವ್ಯಕ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾರತದ ರುಪಾಯಿಯ ಮೌಲ್ಯದಲ್ಲಿ ಮಸ್ಕ್ ಅವರ ಸಂಪತ್ತು ಸುಮಾರು 15 ಲಕ್ಷ ಕೋಟಿ ರೂಪಾಯಿಗಳಷ್ಟು ಇದೆ ಎಂದು ಅಂದಾಜಿಸಲಾಗಿದೆ.