ಬೆಳಗಾವಿ,ಡಿ.19- ಸಂಘಟಿತ ಹೋರಾಟ ಮತ್ತು ಒಗ್ಗಟ್ಟು ಪ್ರದರ್ಶನದ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಹೊರಟಿರುವ ಬಿಜೆಪಿಗೆ ಇದೀಗ ಅಸಮಾಧಾನದ ಧಗೆ ಆವರಿಸಿದೆ.
ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾರಿ ಕಸರತ್ತು ನಡೆಸಿದರೂ ಹೈಕಮಾಂಡ್ ಹಸಿರು ನಿಶಾನೆ ತೋರದ ಪರಿಣಾಮ ಇದೀಗ ಸಿಎಂ ಅಸಮಧಾನದ ಧಗೆಯಲ್ಲಿ ನರಳುವಂತಾಗಿದೆ.
ಭ್ರಷ್ಟಾಚಾರದ ಆರೋಪದ ಸುಳಿಯಲ್ಲಿ ಸಿಲುಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ಈಶ್ವರಪ್ಪ ಇದೀಗ ಗುತ್ತಿಗೆದಾರ ಸಂತೋಷ್ ಸಾವಿನ ತನಿಖೆಯಲ್ಲಿ ನಿರ್ದೋಷಿಯಾಗಿದ್ದಾರೆ ಈ ಹಿನ್ನೆಲೆಯಲ್ಲಿ ಮತ್ತೆ ತಮಗೆ ಮಂತ್ರಿ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಗುತ್ತಿಗೆದಾರನ ಸಾವಿನ ಪ್ರಕರಣದಲ್ಲಿ ತಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಜನ ಸಾಮಾನ್ಯರ ಮನಸ್ಸಿನಲ್ಲಿ ತಮ್ಮನ್ನು ಕಳಂಕಿತ ಎಂದು ಬಿಂಬಿಸಲಾಗಿದೆ ಈಗ ತನಿಖಾ ಸಂಸ್ಥೆ ತಮ್ಮನ್ನು ನಿರ್ದೋಷಿ ಎಂದು ಹೇಳಿರುವ ಹಿನ್ನೆಲೆಯಲ್ಲಿ ತಮಗೆ ಮತ್ತೆ ಮಂತ್ರಿ ಸ್ಥಾನ ಬೇಕು.ಹೀಗಾದರೆ ಮಾತ್ರ ತಮಗಂಟಿರುವ ಕಳಂಕ ದೂರಾಗಲಿದೆ ಎಂದು ವರಿಷ್ಠರ ಮುಂದೆ ಅಹವಾಲು ಮಂಡಿಸಿದ್ದಾರೆ. ಇದಕ್ಕೆ ವರಿಷ್ಠರು ಮುಖ್ಯಮಂತ್ರಿಯತ್ತ ಬೆರಳು ತೋರಿಸಿದ್ದು ಅವರು ತಮ್ಮನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ತಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆಂದು ಗೊತ್ತಾಗಿದೆ.
ಆದರೆ ಸಿಎಂ ಬೊಮ್ಮಾಯಿ ಇವರೊಬ್ಬರಿಗಾಗಿ ಸಂಪುಟ ವಿಸ್ತರಣೆ ಮಾಡಿದರೆ ಬಿಕ್ಕಟ್ಟು ಎದುರಿಸಬೇಕಾಗಬಹುದು.ಇವರೊಂದಿಗೆ ಖಾಲಿ ಇರುವ ಸ್ಥಾನಗಳ ಭರ್ತಿಗೂ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ ಅದರಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಮಾಧಾನ ಪಡಿಸುವ ಅಗತ್ಯವಿದೆ ಇದಕ್ಕಾಗಿ ಅವರ ಪುತ್ರ ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ವರಿಷ್ಠರು ಇದಕ್ಕೆ ಸಮ್ಮತಿಸಲು ನಿರಾಕರಿಸಿದ್ದಾರೆ ಎಂದು ಗೊತ್ತಾಗಿದೆ.
ಮತ್ತೊಂದೆಡೆ ವರಿಷ್ಠರು ಅನುಮತಿ ನೀಡಿದರೂ ತಮಗೆ ಮಂತ್ರಿ ಸ್ಥಾನ ನೀಡುತ್ತಿಲ್ಲ ಎಂದು ಆಕ್ರೋಶಗೊಂಡು ಸಿಎಂ ಬೊಮ್ಮಾಯಿ ವಿರುದ್ಧ ಮುನಿಸಿಕೊಂಡಿರುವ ಈಶ್ವರಪ್ಪ ಇದೀಗ ಸಿಎಂ ನೇತೃತ್ವದ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದ್ದಾರೆ.
ತಮ್ಮ ತವರು ಜಿಲ್ಲೆ ಶಿವಮೊಗ್ಗದ ಹಲವೆಡೆ ನಡೆದ ಜನಸಂಕಲ್ಪ ಯಾತ್ರೆಯಿಂದಲೂ ದೂರ ಉಳಿಯುವ ಮೂಲಕ ತಮ್ಮ ಅಸಮಾಧಾನ ಬಹಿರಂಗ ಪಡಿಸಿದರೂ ಪ್ರಯೋಜನವಾಗಲಿಲ್ಲ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಾರೆ.
ಈ ಕುರಿತಂತೆ ಬಿಜೆಪಿಯ ಹಲವು ನಾಯಕರು ಮಧ್ಯ ಪ್ರವೇಶಿಸಿ ಬಿಕ್ಕಟ್ಟು ಇತ್ಯರ್ಥಕ್ಕೆ ಮಾಡಿದ ಪ್ರಯತ್ನ ವಿಫಲವಾಗಿದೆ. ಮುಖ್ಯಮಂತ್ರಿ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು ತಾವು ಕಲಾಪಕ್ಕೆ ಬಂದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಹೀಗಾಗಿ ಅದರಿಂದ ದೂರ ಉಳಿಯುವುದೆ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ನಡುವೆ ಬಾಗಲಕೋಟೆ ಪ್ರವಾಸದಲ್ಲಿರುವ ಈಶ್ವರಪ್ಪ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ತಾವು ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದರು.
ಸಚಿವ ಸಂಪುಟಕ್ಕೆ ನನ್ನನ್ನು ತೆಗೆದುಕೊಳ್ಳದ್ದಕ್ಕೆ ಅಭಿಮಾನಿಗಳಿಗೆ ನೋವಾಗಿದೆ. ಇದು ನನಗೂ ನೋವುಂಟು ಮಾಡಿದೆ. ಆದ್ದರಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನದಿಂದ ದೂರ ಉಳಿಯುತ್ತೇನೆ’ ಎಂದರು.
ಜನರು ಫೋನ್ ಮಾಡಿ ನಿಮ್ಮನ್ನೇಕೆ ಸಂಪುಟಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಇದರಿಂದ ಅವಮಾನ ಆಗ್ತಿದೆ. ಇದನ್ನು ಅರ್ಥ ಮಾಡಿಸಲು ಸೌಜನ್ಯದ ಪ್ರತಿಭಟನೆ ಮಾಡುತ್ತಿದ್ದೇನೆ’
ಇವತ್ತು, ನಾಳೆ ನಿಮ್ಮನ್ನ ಸಚಿವರನ್ನ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳುತ್ತಲೇ ಇದ್ದಾರೆ. ಯಾವ ಕಾರಣಕ್ಕೆ ತೆಗೆದುಕೊಳ್ಳುತ್ತಿಲ್ಲ ಗೊತ್ತಿಲ್ಲ’ ಎಂದು ಬೇಸರ ಹೊರ ಹಾಕಿದರು.
ತಮ್ಮ ಮೇಲೆ ಆಪಾದನೆ ಬಂದಾಗ ನಾನೇ ರಾಜೀನಾಮೆ ಕೊಡಲು ಮುಂದಾದಾಗ ಪಕ್ಷದ ಹಿರಿಯರು ಆರಂಭದಲ್ಲಿ ಬೇಡ ಎಂದಿದ್ದರು. ನಂತರ ಅವರನ್ನು ಒಪ್ಪಿಸಿ ರಾಜೀನಾಮೆ ಕೊಟ್ಟಿದ್ದೆ. ನನಗೆ ವಯಸ್ಸಾಗಿಲ್ಲ. ಸಚಿವ ಸ್ಥಾನ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗಿರುವುದು ಮುಖ್ಯಮಂತ್ರಿಗಳು ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಕೆ.ಜೆ.ಚಾರ್ಜ್ ಅವರ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಡಿ ಎಂದು ವಿಪಕ್ಷ ನಾಯಕನಾಗಿ ನಾನೇ ಒತ್ತಾಯಿಸಿದ್ದೆ. ಅವರು ರಾಜೀನಾಮೆ ಕೊಟ್ಟರು. ಕ್ಲೀನ್ ಚೀಟ್ ಬಂದ ತಕ್ಷಣ ಕಾಂಗ್ರೆಸ್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡರು. ಇದೀಗ ನನಗೆ ಕ್ಲೀನ್ ಚಿಟ್ ಸಿಕ್ಕಿದರೂ, ಸಂಪುಟಕ್ಕೆ ಸೇರಿಸಿಲ್ಲ ಯಾಕೆಂಬುದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ಸಿಎಂ ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ ಎಂದರು.
ವಿವಾದ ಮಾಡಬೇಡಿ :
ಮತ್ತೊಂದೆಡೆ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಬೊಮ್ಮಾಯಿ ನಿರಾಕರಿಸಿದ್ದಾರೆ.ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೀವು ಅದನ್ನೆಲ್ಲ ಸೃಷ್ಟಿ ಮಾಡಿಕೊಂಡು ಹೇಳಬೇಡಿ. ನಾನು ಈಶ್ವರಪ್ಪ ಜೊತೆ ಮಾತಾಡ್ತೀನಿ ಎಂದು ಹೇಳಿದರು.
Previous Articleಸುವರ್ಣಸೌಧದ ಮೆಟ್ಟಿಲ ಮೇಲೆ ಕುಳಿತ ಕಾಂಗ್ರೆಸ್ಸಿಗರು
Next Article DK ಶಿವಕುಮಾರ್ ಗೆ ಮತ್ತೊಮ್ಮೆ IT ಹೊಡೆತ