ಬೆಂಗಳೂರು,ಏ.11- ರಾಜ್ಯ ವಿಧಾನಸಭೆ ಚುನಾವಣೆಯ ಕಣಕ್ಕೆ ಭರ್ಜರಿ ರಂಗು ಬಂದಿರುವ ಬೆನ್ನಲ್ಲೇ ಕೆಲವು ಆಶ್ಚರ್ಯ ರಾಜಕೀಯ ನಿರ್ಧಾರಗಳು ಹೊರ ಬೀಳುತ್ತಿವೆ. ಕಳೆದ ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ದಿಡೀರ್ (Senior BJP leader K. S. Eshwarappa) ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ.
ಸಂಘ ಪರಿವಾರ ಹಿನ್ನೆಲೆಯಿಂದ ಬಂದು, ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡ ಈಶ್ವರಪ್ಪ, ಆನಂತರ ಜನಸಂಘದ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿ ರಾಜ್ಯ ಬಿಜೆಪಿಯ ಪ್ರಮುಖ ನಾಯಕರಾಗಿದ್ದರು. ಎರಡು ಬಾರಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಈಶ್ವರಪ್ಪ ತಮ್ಮ ಸುದೀರ್ಘ 40 ವರ್ಷಗಳ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.
ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಮಗೆ ಅವಕಾಶ ನೀಡಬೇಕು. ವಯಸ್ಸು ಸೇರಿದಂತೆ ಹಲವು ಕಾರಣಗಳಿಂದ ತಮಗೆ ಟಿಕೆಟ್ ನೀಡಲು ಸಾಧ್ಯವಿಲ್ಲ, ಎಂದಾದರೆ ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸಲು ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಗೆ ಈಶ್ವರಪ್ಪ ಮನವಿ ಸಲ್ಲಿಸಿದ್ದರು.
ಈ ನಡುವೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಬೇಕು ಎಂದು ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿ ಒಂದು ವೇಳೆ ಸಿದ್ದರಾಮಯ್ಯ ಕೋಲಾರ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದರೆ, ಅಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಈಶ್ವರಪ್ಪ ಅವರನ್ನು ಕಣಕ್ಕಿಳಿಸುವ ಕುರಿತು ಚಿಂತನೆ ನಡೆಸಿತ್ತು.
ಈ ಕುರಿತು ಪಕ್ಷದ ಚಿಂತಕರ ಚಾವಡಿಯಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈಶ್ವರಪ್ಪ ದಿಢೀರ್ ಎಂದು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ ಈ ಸಂಬಂಧ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರವನ್ನು ಬರೆದಿದ್ದಾರೆ.
ನಾನು ಸ್ವ– ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು ಎಂದು ವಿನಂತಿಸುತ್ತೇನೆ ಎಂದಿದ್ದಾರೆ.
ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ ರಾಜ್ಯ ಉಪ–ಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ಮೂಲತಃ ಬಳ್ಳಾರಿಯವರಾದ ಈಶ್ವರಪ್ಪ, Businessದ ನಿಮಿತ್ತ ಶಿವಮೊಗ್ಗಕ್ಕೆ ಬಂದು ಅಲ್ಲಿಯೇ ಭದ್ರವಾಗಿ ನೆಲೆಯೂರಿದರು. ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಈಶ್ವರಪ್ಪ ಶಿವಮೊಗ್ಗದಲ್ಲಿ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಕಾರ್ಯದಲ್ಲಿ ನಿರತರಾಗಿದ್ದರು ಈ ಮೂಲಕ ಶಿವಮೊಗ್ಗ ಈಶ್ವರಪ್ಪ ಅವರ ಕರ್ಮ ಭೂಮಿಯಾಗಿ ಪರಿಣಮಿಸಿತು.
ಪ್ರಬಲ ಹಿಂದುತ್ವ ಪ್ರತಿಪಾದಕರಂತೆ ಕಂಡರೂ ಕೂಡ ಈಶ್ವರಪ್ಪ ಎಂದಿಗೂ ಕೋಮುವಾದಿಯಾಗಿರಲಿಲ್ಲ. ಇವರ ಬೆಂಕಿ ಉಗುಳುವಂತಹ ಮಾತುಗಳು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿ ಕಟ್ಟುವಂತೆ ಕಂಡರೂ ಕೂಡ, ಎಂದಿಗೂ ಅವರು ಸಮುದಾಯವನ್ನು ದ್ವೇಷಿಸುವಂತಹ ಕೆಲಸ ಮಾಡಲಿಲ್ಲ.
ಶಿವಮೊಗ್ಗ, ಸಮಾಜವಾದಿಗಳ ತವರೂರು. ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಸದಾ ಮುಂಚೂಣಿಯಲ್ಲಿದ್ದ ಮಲೆನಾಡಿನ ಪ್ರಮುಖ ಪ್ರದೇಶ. ಇಲ್ಲಿ ನಾವು ಒಂದು ಮೂಲೆಯಲ್ಲಿ ಯಡಿಯೂರಪ್ಪ, ಇನ್ನೊಂದು ಮೂಲೆಯಲ್ಲಿ ಈಶ್ವರಪ್ಪ ,ಸಂಘ ಪರಿವಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರೋಧದ ರಾಜಕಾರಣ ಮಾಡುತ್ತಾ ಜನಸಂಘ ನಂತರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪ್ರಮುಖ ನಾಯಕರು. ಕಳೆದ 4 ದಶಕಗಳಿಂದ ಈ ಇಬ್ಬರು ನಾಯಕರು ರಾಜ್ಯಕಾರಣ ಮತ್ತು ಶಿವಮೊಗ್ಗ ರಾಜಕಾರಣದ ಅವಿಭಾಜ್ಯ ಅಂಗವಾಗಿದ್ದರು.
ಈ ಇಬ್ಬರು ನಾಯಕರು ಚುನಾವಣೆಗೆ ಸ್ಪರ್ಧಿಸದೆ ಇದೆ ಮೊದಲ ಬಾರಿಗೆ ರಾಜ್ಯ ವಿಧಾನಸಭೆಯ ಚುನಾವಣೆ ನಡೆಯುತ್ತಿದೆ.
ಬಿಜೆಪಿಯ ಹಿಂದುಳಿದ ಸಮುದಾಯಗಳ ಮುಖವಾಣಿಯಂತಿದ್ದ ಈಶ್ವರಪ್ಪ ತಾವು ಎರಡನೇ ಬಾರಿ ಪಕ್ಷದ ಅಧ್ಯಕ್ಷರಾಗಿ ನೇಮಕಗೋಂಡಾಗ ಪಕ್ಷದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಎಂಬ ಹೊಸ ಹೊಸ ವಿಭಾಗವನ್ನು ತೆರೆಯುವ ಮೂಲಕ ಗಮನ ಸೆಳೆದರು.
ಒಂದು ಕಾಲದಲ್ಲಿ ರಾಜ್ಯ ಬಿಜೆಪಿ ಎಂದರೆ ಈಶ್ವರಪ್ಪ ಮತ್ತು ಯಡಿಯೂರಪ್ಪ ಎಂಬಂತೆ ಇತ್ತು. ರಾಜ್ಯ ವಿಧಾನಸಭೆಗೆ ಬಿಜೆಪಿಯಿಂದ ಈ ಇಬ್ಬರೇ ಆರಿಸಿ ಬರುತ್ತಿದ್ದುದು ಮತ್ತೂ ಒಂದು ವಿಶೇಷ. ಶಿವಮೊಗ್ಗ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಜೋಡೆತ್ತುಗಳಂತೆ ಸಂಚರಿಸಿ ಈ ಇಬ್ಬರು ನಾಯಕರು ಬಿಜೆಪಿಯನ್ನು ಪ್ರಬಲವಾಗಿ ಸಂಘಟಿಸುವ ಮೂಲಕ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟರ ಮಟ್ಟಿಗೆ ಪಕ್ಷವನ್ನು ಕಟ್ಟಿದರು. ಇದಕ್ಕಾಗಿ ಪ್ರತಿಫಲ ಎಂಬಂತೆ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಈಶ್ವರಪ್ಪ ಉಪಮುಖ್ಯಮಂತ್ರಿಗಳು ಕರ್ತವ್ಯ ನಿರ್ವಹಿಸಿದರು.
ಶಿವಮೊಗ್ಗದಲ್ಲಿ ಅಲ್ಪಸಂಖ್ಯಾತ ಮತ್ತು ಬಹು ಸಂಖ್ಯಾತರು ಸರಿಸಮಾನವಾಗಿದ್ದಾರೆ. ತೀರಾ ಇತ್ತೀಚಿನವರೆಗೂ ಈ ಎರಡು ಸಮುದಾಯಗಳ ನಡುವೆ ಯಾವುದೇ ರೀತಿಯ ದೊಡ್ಡ ಕಂದಕ ಏರ್ಪಟ್ಟಿರಲಿಲ್ಲ. ಈಶ್ವರಪ್ಪ ಸಂಘ ಪರಿವಾರದ ಹಿನ್ನೆಲೆಯಿಂದ ಬಂದು ಬಿಜೆಪಿಯ ನಾಯಕರಾದರೂ ಕೂಡ, ಇಲ್ಲಿನ ಅಲ್ಪಸಂಖ್ಯಾತರು ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸುತ್ತಿದ್ದುದು ವಿಶೇಷ. ಅಷ್ಟರಮಟ್ಟಿಗೆ ಈಶ್ವರಪ್ಪ ಎಲ್ಲಾ ಸಮುದಾಯಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ನಾಯಕರಾಗಿ ಗಮನ ಸೆಳೆದಿದ್ದರು. ರಾಜಕೀಯ ಕಾರಣಕ್ಕಾಗಿ, ಕೆಲವೊಮ್ಮೆ ಅತ್ಯಂತ ಕಟು ಮಾತುಗಳನ್ನು ಬಳಸಿ ಟೀಕೆ ಮಾಡುತ್ತಿದ್ದ ಈಶ್ವರಪ್ಪ, ಮರು ಕ್ಷಣದಲ್ಲಿಯೇ ಮೆತ್ತಗಾಗುತ್ತಿದ್ದರು. ಒಮ್ಮೊಮ್ಮೆ ಅವರ ನಡವಳಿಕೆ ಮಾತು ಮತ್ತು ಕೃತಿಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಇರುತ್ತಿತ್ತು ಈ ಕಾರಣಕ್ಕಾಗಿ ಶಿವಮೊಗ್ಗದ ಅಲ್ಪಸಂಖ್ಯಾತರು ಈಶ್ವರಪ್ಪ ಅವರನ್ನು ತಮ್ಮ ನಾಯಕ ಎಂದು ಗೌರವಿಸುತ್ತಿದ್ದರು.