ಕೃಪೆ – BBC NEWS
ಇತ್ತೀಚೆಗಿನ ಕೆಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ಕುರಿತು ಪ್ರಪಂಚದಾದ್ಯಂತ ಹಲವಾರು ರಾಷ್ಟ್ರಗಳಲ್ಲಿ ವಿವಿಧ ಪ್ರಯೋಗಗಳನ್ನು ನಡೆಸುತ್ತಿರುವುದು ಒಂದು ಆರೋಗ್ಯಕರವಾದ ಬೆಳವಣಿಗೆಯಾಗಿದೆ. ಇಂಥಹುದೇ ಒಂದು ಪರಿಸರ ಪೂರಕ ಪ್ರಯೋಗ ಯೂರೋಪಿನ (Europe) ಫಿನ್ಲ್ಯಾನ್ಡ್ (Finland) ನಲ್ಲಿ ನಡೆಯುತ್ತಿದೆ. ಈ ಪ್ರಯೋಗದಿಂದ ತಿಳಿದುಬಂದಿರುವ ಒಂದು ಅಚ್ಚರಿಯ ಮತ್ತು ಸಂತೋಷದ ವಿಷಯವೆಂದರೆ, ಸಮುದ್ರದಲ್ಲಿ ಹೇರಳವಾಗಿ ದೊರೆಯುವ ಸಮುದ್ರ ಪಾಚಿಯನ್ನು ಪ್ಲಾಸ್ಟಿಕ್ ನ ಪರ್ಯಾಯವಾಗಿ ಬಳಸಬಹುದಂತೆ!
ಫಿನ್ಲ್ಯಾನ್ಡ್ ದೇಶದ ಗಡಿಯಲ್ಲಿರುವ ಬಾಲ್ಟಿಕ್ ಸಮುದ್ರದಲ್ಲಿ (Baltic Sea) ನೀಲಿ-ಹಸಿರು ಬಣ್ಣದ ಪಾಚಿಗಳು ಹೇರಳವಾಗಿ ಕಂಡುಬರುತ್ತವೆ. ಇದಕ್ಕೆ ಕಾರಣ, ಸಮುದ್ರಕ್ಕೆ ಬಂದು ಸೇರುವ ನದಿಗಳಲ್ಲಿರುವ ಅತ್ಯಧಿಕ ಪ್ರಮಾಣದ nitrogen ಮತ್ತು phosphorus ಅಂಶಗಳು. ಸುತ್ತ ಮುತ್ತಲಿರುವ ದೇಶಗಳಲ್ಲಿ nitrogen ಮತ್ತು phosphorus ಅಂಶಗಳು ಹೆಚ್ಚಿರುವ ಕೃತಕ ಗೊಬ್ಬರಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳಿಂದ ಪಾಚಿಗಳು ಅತಿ ವೇಗದಲ್ಲಿ ಬೆಳೆದು, ಸಮುದ್ರದ ಮೇಲ್ಪದರವನ್ನು ಬಹಳ ವಿಸ್ತಾರವಾಗಿ ವ್ಯಾಪಿಸಿಕೊಳ್ಳುತ್ತವೆ. ಇದರಿಂದ ಅವಶ್ಯಕ ಸೂರ್ಯನ ಕಿರಣಗಳು ನೀರಿನಾಳವನ್ನು ತಲುಪಲಾಗದೆ, ಆಮ್ಲಜನಕದಲ್ಲಿ ಕೊರತೆ ಉಂಟಾಗಿ, ನೀರಿನ ಗುಣಮಟ್ಟ ಕ್ಷೀಣಿಸುತ್ತಿದೆ. ಇದು ಮೀನು ಮತ್ತಿತರ ಸಮುದ್ರ ಜೀವಿಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತಿದೆ. ಅಲ್ಲದೆ, ಮೀನುಗಾರರಿಗೂ ಮತ್ತು ಪ್ರವಾಸೋದ್ಯಮಕ್ಕೂ ಇದು ಸಮಸ್ಯೆಯಾಗಿದೆ.
ಬಹು ವರ್ಷಗಳಿಂದ ಬಾಲ್ಟಿಕ್ ಸಮುದ್ರವನ್ನು ಕಾಡುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಫಿನ್ಲ್ಯಾನ್ಡ್ ನ ಗ್ರಾನ್ಸ್ಟ್ರಮ್ (Biochemist Ms.Granström ) ಎನ್ನುವವರು ಮುಂದಾಗಿದ್ದಾರೆ. ಇದರ ಕುರಿತಾಗಿ ಅವರು ಪ್ರಯೋಗವೊಂದನ್ನು ನಡೆಸುತ್ತಿದ್ದಾರೆ. ಇದರಲ್ಲಿ ಅವರು ಸೌಂದರ್ಯವರ್ಧಕಗಳು ಮತ್ತು ಮಾನವ ಆಹಾರದ ಜೊತೆಗೆ, ಪಾಚಿಗಳ ಸಾರಗಳನ್ನು ಮಾರ್ಜಕಗಳು, ಪಶು ಆಹಾರ, ಪ್ಯಾಕೇಜಿಂಗ್ ಮತ್ತು ಪ್ಲಾಸ್ಟಿಕ್‌ಗೆ ಬದಲಿಯಾಗಿಯೂ ಬಳಸಬಹುದು ಎಂದು ಕಂಡುಕೊಂಡಿದ್ದಾರೆ. ಅಲ್ಲದೆ ಜಿಡ್ಡಿನಾಂಶ-ಆಧಾರಿತ ಪದಾರ್ಥಗಳಿಗೆ ಬದಲಿಯಾಗಿಯೂ ಪಾಚಿಗಳು ಉಪಯುಕ್ತ ಎಂಬುದನ್ನು ಪ್ರಯೋಗ ತಿಳಿಸಿಕೊಟ್ಟಿದೆ. ಇದನ್ನು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಮಾಡಲೆಂದು, ಗ್ರಾನ್ಸ್ಟ್ರಮ್ 2019 ರಲ್ಲಿ Origin by Ocean (ObO) ಎನ್ನುವ ಕಂಪನಿಯನ್ನು ಸ್ಥಾಪಿಸಿದರು. ಸಮುದ್ರದಿಂದ ಸಂಗ್ರಹಿಸುವ ಪಾಚಿಯನ್ನು “ನೌವು” (Nauvu) ಎನ್ನುವ ಪೇಟೆಂಟ್ ಪಡೆದ ಜೈವಿಕ ಸಂಸ್ಕರಣಾ ತಂತ್ರಜ್ಞಾನವನ್ನು ಬಳಸಿ ಹಲವಾರು ಬಳಸಬಹುದಾದ ವಸ್ತುಗಳಾಗಿ ಪ್ರತ್ಯೇಕಿಸಲಾಗುತ್ತದೆ. ನಂತರ ಇವುಗಳನ್ನು ಆಹಾರ, ಸೌಂದರ್ಯವರ್ಧಕಗಳು, ಜವಳಿ Businessಗಳಿಗೆ, ಪ್ಯಾಕಿಂಗ್ ಮತ್ತು ಕೃಷಿ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಪ್ರಯೋಗ ಯಶಸ್ವಿಯಾದಲ್ಲಿ, ವಿಶ್ವದ ಹಲವೆಡೆ ಇದನ್ನು ಪ್ರಯೋಗಿಸುವ ಯೋಜನೆಯನ್ನು ಹೊಂದಿದ್ದಾರೆ.
ಸ್ವೀಡನ್ (Sweden) ದೇಶದಲ್ಲಿ ನಡೆದ ಮತ್ತೊಂದು ಪ್ರಯೋಗದ ಪ್ರಕಾರ, ಪಶುಗಳ ಆಹಾರಗಳಲ್ಲಿ ಮುಖ್ಯವಾಗಿ ಬೇಕಾಗುವ ಪದಾರ್ಥಗಳ ಸ್ಥಾನವನ್ನು ಪಾಚಿಗಳು ತುಂಬಬಲ್ಲವಂತೆ. ಹಾಗಾಗಿ, ಭವಿಷ್ಯದಲ್ಲಿ ಪಾಚಿಗಳು ಪಶು ಆಹಾರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು.
ಸಮುದ್ರವನ್ನು ಪಾಚಿಯಿಂದ ಸಂರಕ್ಷಿಸಿ, ಅದರಿಂದ ತಯಾರಿಸಲ್ಪಡುವ ಹಲವು ಪರ್ಯಾಯ ವಸ್ತುಗಳಿಂದ ಪರಿಸರವನ್ನೂ ರಕ್ಷಿಸಲು ಸಹಾಯವಾಗುವ ಇಂತಹ ಪ್ರಯೋಗಗಳು ಯಶಸ್ವಿಯಾಗಲಿ. ಉಸಿರು ಕೊಟ್ಟ ಭೂ ತಾಯಿ, ತಾನೂ ನಿರಾಳಳಾಗಿ ಉಸಿರಾಡುವಂತಾಗಲಿ ಎಂದು ಆಶಿಸೋಣ.