ಬೆಂಗಳೂರು, ನ.29 -ತಮಿಳುನಾಡಿನಿಂದ ಬಂದು ನಗರದಲ್ಲಿ ಹಸುಗೂಸು ಮಾರಾಟ ಮಾಡುತ್ತಿದ್ದ ಜಾಲದ ಸಂಬಂಧ ಮತ್ತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜಾಲದಲ್ಲಿ ಏಜೆಂಟ್ ಆಗಿದ್ದ ಮಹಿಳಾ ಆರೋಪಿ ರಮ್ಯಾಳನ್ನು ಕಾರ್ಯಾಚರಣೆ ಕೈಗೊಂಡು ಹೆಬ್ಬಾಳದಲ್ಲಿ ಬಂಧಿಸಲಾಗಿದೆ. ಇದರ ಜೊತೆಗೆ ರಾಜಾಜಿನಗರದಲ್ಲಿ ನಕಲಿ ವೈದ್ಯ ಕೆವಿನ್ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಹಸುಗೂಸು ಮಾರಾಟ (Child Trafficking Racket) ಗ್ಯಾಂಗ್ಗೆ ಮಗುವನ್ನು ಮಾರಿದ್ದ ಆರೋಪಿ ರಮ್ಯಾಳ ಸಂಬಂಧಿ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದಳು. ಅಬಾರ್ಷನ್ಗೆ ಓಡಾಡುತ್ತಿದ್ದ ಯುವತಿಯನ್ನು ರಮ್ಯಾ ಆರೈಕೆ ಮಾಡಿದ್ದಳು. ಆಕೆಯನ್ನು 9 ತಿಂಗಳು ಜೋಪಾನ ಮಾಡಿ ಮಗುವನ್ನು ಪಡೆದುಕೊಂಡಿದ್ದಳು. ಬಳಿಕ ಇದೇ ಗ್ಯಾಂಗ್ ಜೊತೆ ಸೇರಿ ಮಗುವನ್ನು ಮಾರಾಟ ಮಾಡಿದ್ದಳು.
ಮಗು ಹೆತ್ತುಕೊಟ್ಟಿದ್ದಕ್ಕೆ ಸಂಬಂಧಿ ಯುವತಿಗೆ ರಮ್ಯಾ ಹಣ ನೀಡಿದ್ದಳು. ನಂತರ ಹೊಸ ವರನನ್ನು ನೋಡಿ ಯುವತಿಗೆ ಮದುವೆ ಕೂಡ ಮಾಡಿಸಿದ್ದಳು. ಮಗು ಮಾರಾಟ ಪ್ರಕರಣದಲ್ಲಿ ಇತರೆ ಆರೋಪಿಗಳು ರಮ್ಯಾಳ ಹೆಸರು ಬಾಯ್ಬಿಟ್ಟಿದ್ದರು.
ಪ್ರಕರಣದಲ್ಲಿ ಒಟ್ಟಾರೆ 11ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮೊದಲು ಬಂಧಿತ ನಾಲ್ವರು ಆರೋಪಿಗಳನ್ನು ಕೋರ್ಟ್ ಹಾಜರುಪಡಿಸಿ ಮತ್ತೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ.
ಕ್ಲಿನಿಕ್ ನಡೆಸುತ್ತಿದ್ದ ಕೆವಿನ್:
ಹಸುಗೂಸುಗಳ ಮಾರಾಟ ಜಾಲದ ಬಂಧಿತ ನಕಲಿ ವೈದ್ಯ ಕೆವಿನ್ ಎಂಬಿಬಿಎಸ್ ಉತ್ತೀರ್ಣನಾಗದಿದ್ದರೂ ಕ್ಲಿನಿಕ್ ನಡೆಸುತ್ತಿದ್ದ. ಡಾಕ್ಟರ್ ಕೆವಿನ್ ಎನ್ನುವ ಬೋರ್ಡ್ ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಆರೋಪಿ ಕೆವಿನ್ ಹಸುಗೂಸು ಮಾರಾಟಕ್ಕೆ ದಾಖಲೆಗಳನ್ನು ಮಾಡಿಕೊಡುತ್ತಿರುವುದು ಪತ್ತೆಯಾಗಿದೆ.
ಆರೋಪಿ ಕೆವಿನ್ ಹಸುಗೂಸು ಮಾರಾಟ ಮಾಡಿದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ನಕಲಿ ವೈದ್ಯ ಕೆವಿನ್ನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.