ಬೆಂಗಳೂರು,ಆ.16 – ಸಂದರ್ಶನವೊಂದರಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಡಿಯಲ್ಲಿ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (SS Mallikarjun) ಅವರ ವಿರುದ್ಧ ವ್ಯಕ್ತಿಯೊಬ್ಬರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮರಿಯಪ್ಪನ ಪಾಳ್ಯದ ಎಸ್.ಎಂ.ದಿವಾಕರ್ ಎಂಬುವರು ನೀಡಿದ ದೂರಿನ ಮೇರೆಗೆ ಸಚಿವರ ವಿರುದ್ಧ ಗಂಭೀರವಲ್ಲದ ಅಪರಾಧ ಪ್ರಕರಣ (ಎನ್‍ಸಿಆರ್) ದಾಖಲಾಗಿದೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಖಾಸಗಿ ಚಾನೆಲ್‍ನ ಸಂದರ್ಶನವೊಂದರಲ್ಲಿ ಮಾತನಾಡುವಾಗ ಸಚಿವರು ‘ಊರನ್ನು ಹೊಲಗೇರಿ ಮಾಡಬೇಡಿ’ ಎಂದು ಹೇಳಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ದಿವಾಕರ್ ಅವರಿಂದ ದೂರು ಸ್ವೀಕರಿಸಿ ಪರಿಶೀಲನೆ ನಡೆಸಲಾಯಿತು. ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಅಭಿಪ್ರಾಯದಂತೆ, ದೂರನ್ನು ವಿಧಾನಸೌಧ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಸಚಿವ ಮಲ್ಲಿಕಾರ್ಜುನ್ ವಿರುದ್ಧ ಸದ್ಯಕ್ಕೆ ಎಫ್‌ಐಆರ್ ದಾಖಲಾಗಿಲ್ಲ. ವಿಧಾನಸೌಧ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ತಿಳಿದು ಬಂದಿದೆ. ವಿಧಾನಸೌಧ ಠಾಣೆ ಪೊಲೀಸರು, ‘ದೂರು ಪರಿಶೀಲಿಸಿ ಮುಂದಿನ ಕ್ರಮ’ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.
LATEST KANNADA NEWS | VARTHCHAKRA