ಬೆಂಗಳೂರು – ಪರಿಸರದ ಮೇಲಾಗುತ್ತಿರುವ ದಾಳಿಯನ್ನು ತಡೆಗಟ್ಟುವ ದೃಷ್ಟಿಯಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ವಿಪರ್ಯಾಸ ಏನಂದರೆ ಹೈಕೋರ್ಟ್ ಆದೇಶವಿದ್ದರೂ ಬೆಂಗಳೂರಿನ ಹಲವೆಡೆ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳಿಗೆ ಕಡಿವಾಣ ಬಿದ್ದಿಲ್ಲ.
ಇದೀಗ ಚುನಾವಣಾ ವರ್ಷ ಆಗಿರುವುದರಿಂದ ರಸ್ತೆಗಳ ಇಕ್ಕೆಲಗಳಲ್ಲೂ ರಾಜಕಾರಣಿಗಳ ಫೋಟೋ, ಸಾಧನೆಗಳು ಹಾಗೂ ಶುಭಾಶಯಗಳದ್ದೇ ಕಾರುಬಾರು ನಗರದ ಸೌಂಧರ್ಯಕ್ಕೆ ಈ ಫ್ಲೆಕ್ಸ್, ಬ್ಯಾನರ್‌ಗಳು ಹಾನಿ ಉಂಟು ಮಾಡುತ್ತಿವೆ.
ಅದರಲ್ಲೂ ಬೆಂಗಳೂರಿನ ಅತ್ಯಂತ ಸುಸಜ್ಜಿತ ಬಡಾವಣೆ, ಬುದ್ದಿವಂತರ ಪ್ರದೇಶ ಎಂದೇ ಗುರುತಿಸಲ್ಪಡುವ ಜಯನಗರದಲ್ಲಿ ಈ ಬ್ಯಾನರ್ , ಫ್ಲಕ್ಸ್ ಗಳ ಹಾವಳಿ ಅತ್ಯಧಿಕವಾಗಿದೆ.ಅದೂ ಕೂಡಾ ಕೋರ್ಟ್ ಆದೇಶದ ಪೂರ್ಣ ಅರಿವಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿರುವ ವಿವೇಕ್ ಸುಬ್ಬಾರೆಡ್ಡಿ ಅವರೇ ಈ ಆದೇಶ ಉಲ್ಲಂಘಿಸಿದ್ದಾರೆ.
ಜಯನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮಹದಾಸೆ ಹೊಂದಿರುವ ವಿವೇಕ್ ಸುಬ್ಬಾರೆಡ್ಡಿ ಜಯನಗರದ ಬೀದಿ ಬೀದಿಗಳಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದಾರೆ ಹೊಸ ವರ್ಷದ ಶುಭಾಷಯ ಕೋರುವ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಬ್ಯಾನರ್ ಹಾಗೂ ಫ್ಲೆಕ್ಸ್ ಗಳು ರಾರಾಜಿಸುತ್ತಿವೆ.
ಫ್ಲೆಕ್ಸ್, ಬ್ಯಾನರ್ ಸಂಸ್ಕೃತಿಗೆ ಜಯನಗರದ ನಿವಾಸಿಗಳ ವಿರೋಧವಿದ್ದರೂಇವೆಲ್ಲಕ್ಕೂ ಡೋಂಡ್ ಕೇರ್ ಎಂಬ ರೀತಿಯಲ್ಲಿ ವಿವೇಕ್ ಸುಬ್ಬಾರೆಡ್ಡಿ ವರ್ತಿಸುತ್ತಿದ್ದಾರೆ.
ಮತ್ತೂ ವಿಪರ್ಯಾಸವೆಂದರೆ ಕ್ರೈಸ್ತ ಸಂಪ್ರದಾಯದ ಹೊಸ ವರ್ಷಾಚರಣೆ ಮಾಡಬೇಡಿ ಎಂದು ವಿಶ್ವ ಹಿಂದೂ ಪರಿಷತ್ ಜಯನಗರ ಬಡಾವಣೆಯಲ್ಲಿ ಮೆರವಣಿಗೆ ಮಾಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದೆ.ಆದರೆ ವಿಶ್ವ ಹಿಂದೂ ಪರಿಷತ್ ನ ರಾಜಕೀಯ ಮುಖವಾಣಿಯಾದ ಬಿಜೆಪಿಯ ವಿವೇಕ್ ಸುಬ್ಬಾರೆಡ್ಡಿ ಹೊಸ ವರ್ಷ ಸ್ವಾಗತಿಸುವ ಹಾಗೂ ಶುಭ ಕೋರುವ ಬ್ಯಾನರ್ , ಫ್ಲೆಕ್ಸ್ ಅಳವಡಿಸಿರುವುದು ಮತ್ತೂ ವಿಪರ್ಯಾಸ. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಯ ನಗರ ನಿವಾಸಿಗಳು ವಿವೇಕ್ ಸುಬ್ಬಾರೆಡ್ಡಿ ಇನ್ನೂ ಶಾಸಕರಾಗಿಲ್ಲ ಈಗಲೇ ಜನಾಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ ಇನ್ನೂ ಶಾಸಕರಾದರೆ ನಮ್ಮ ಅಭಿಪ್ರಾಯಗಳಿಗೆ ಯಾವ ಬೆಲೆ ಸಿಗಲಿದೆ ಎನ್ನುತ್ತಾರೆ..