ಬೆಂಗಳೂರು,ಜೂ.22- ಸ್ನೇಹಿತರ ನಡುವೆ ಕೇವಲ 50 ರೂಗಳಿಗೆ ನಡೆದ ಜಗಳವು ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಬಸವೇಶ್ವರ ನಗರದ ಕುರುಬರಹಳ್ಳಿ ಸರ್ಕಲ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಲಗ್ಗೆರೆಯ ಶಿವಮಾಧು(24) ಕೊಲೆಯಾದವರು. ಆತನ ಸ್ನೇಹಿತ ಶಾಂತಕುಮಾರ್ ಕೃತ್ಯ ನಡೆಸಿ ಪರಾರಿಯಾಗಿದ್ದು ಆತನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕೊಲೆಯಾದ ಶಿವಮಾಧು ಮತ್ತು ಆರೋಪಿ ಶಾಂತಕುಮಾರ್ ಇಬ್ಬರೂ ಸ್ನೇಹಿತರು. ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದವರು. ಇದೇ ಕುರುಬರಹಳ್ಳಿ ಸರ್ಕಲ್ ಬಳಿಯಿಂದ ಕೆಲ ವರ್ಷಗಳ ಹಿಂದೆ ಲಗ್ಗೆರೆ ಬ್ರಿಡ್ಜ್ ಸಮೀಪ ಶಿಫ್ಟ್ ಆಗಿದ್ದರು. ಆದರೂ ಹಳೆ ಅಡ್ಡಾಗೆ ಆಗಾಗ ಬರುತ್ತಿದ್ದರು. ಆರೋಪಿ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಮೃತ ಶಿವಮಾಧು ಆಟೋ ಚಾಲಕನಾಗಿದ್ದ. ಎಂದಿನಂತೆ ನಿನ್ನೆ ಕುರುಬರಹಳ್ಳಿ ಸರ್ಕಲ್ ಕಡೆ ಬಂದಿದ್ದ ಶಿವಮಾಧು, ಶಾಂತಕುಮಾರ್ ಮತ್ತು ಸ್ನೇಹಿತರು ಹತ್ತಿರದ ಮೈದಾನವೊಂದರಲ್ಲಿ ಕ್ರಿಕೆಟ್ ಆಡಲು ಹೋಗಿದ್ದಾರೆ.
ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆಂದು ರಾತ್ರಿ 8.30ರ ಸುಮಾರಿಗೆ ಸರ್ಕಲ್ ಬಳಿಯಿರುವ ಸೈಬರ್ ಸೆಂಟರ್ವೊಂದಕ್ಕೆ ಹೋಗಿದ್ದರು.
ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂ ತೆಗೆದುಕೊಂಡಿದ್ದಾನೆ. ಆಗ ಯಾಕೆ ತೆಗೆದುಕೊಂಡೆ, ಅದನ್ನು ಕೊಡು ಎಂದು ಕೇಳಿದ್ದ ಶಾಂತಕುಮಾರ್ಗೆ ಕೊಡಲ್ಲ ಏನಿವಾಗ ಎಂದು ಶಿವಮಾಧು ಸ್ನೇಹದ ಸಲುಗೆಯಲ್ಲೇ ಹೇಳಿದ್ದಾನೆ.
ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಜೊತೆಯಲ್ಲೇ ತಂದಿದ್ದ ಚಾಕು ತೆಗೆದುಕೊಂಡು ಆರೋಪಿ ಶಾಂತಕುಮಾರ್, ಶಿವಮಾಧು ಎದೆಗೆ ಚುಚ್ಚಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾಧುನನ್ನು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಆತ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರು ತೆರಳಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದರು.
Previous Articleಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಘೋಷಣೆ
Next Article ಪ್ರೇಯಸಿ ಕೊಲೆಗೈದು ತಾನು ಸತ್ತ..!