ಬೆಂಗಳೂರು, ಆ.7- ಲೋಕಸಭೆ Electionಗೆ ಸಿದ್ದವಾಗಬೇಕಾದರೆ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಚುರುಕಾಗಬೇಕು,ಹೊಸ ಕಾಮಗಾರಿ ಕೈಗೊಳ್ಳಲು ಅನುದಾನ ನೀಡಬೇಕು ಎಂಬ ಬೇಡಿಕೆ ಮಂಡಿಸಿರುವ ಕಾಂಗ್ರೆಸ್ ಶಾಸಕರು, ತಮ್ಮ ಪತ್ರಗಳಿಗೆ ಮಂತ್ರಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆಪಾದಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಇದ್ದ ಸರ್ಕಾರಿ ನೌಕರರನ್ನು ಮತ್ತೆ ಅದೇ ರೀತಿಯ ಹುದ್ದೆಗಳಲ್ಲಿ ಮುಂದುವರಿಸಲಾಗಿದೆ ಸರ್ಕಾರಿ ನೌಕರರ ವರ್ಗಾವಣೆ ಸಮಯದಲ್ಲಿ ಶಾಸಕರ ಪತ್ರಗಳಿಗೆ ಮಂತ್ರಿಗಳು ಮಾನ್ಯತೆ ನೀಡಿಲ್ಲ ಎಂದು ಮಂತ್ರಿಗಳ ಮುಂದೆ ಶಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ
ಕಾಂಗ್ರೆಸ್ ಶಾಸಕರಲ್ಲಿರುವ ಅತೃಪ್ತಿ, ಅಸಮಾಧಾನವನ್ನು ನಿವಾರಿಸಿ ಸಚಿವರೊಂದಿಗೆ ಸಮನ್ವಯ ಮೂಡಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿನಿಂದ ಜಿಲ್ಲಾವಾರು ಸಭೆಗಳನ್ನು ಆರಂಭಿಸಿದ್ದಾರೆ.
ಮೊದಲಿಗೆ ತುಮಕೂರು ಜಿಲ್ಲೆಯ ಶಾಸಕರು ಮತ್ತು ಮಂತ್ರಿಗಳ ಸಭೆ ನಡೆಸಲಾಯಿತು. ನಂತರ ಯಾದಗಿರಿ, ಚಿತ್ರದುರ್ಗ ಜಿಲ್ಲೆಯ ಸಭೆ ನಡೆಯಿತು.
ಈ ಸಭೆಯಲ್ಲಿ ಬಹುತೇಕ ಎಲ್ಲಾ ಶಾಸಕರು ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆಯ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು.
ತುಮಕೂರು ಸಭೆ:
ತುಮಕೂರು ಜಿಲ್ಲೆಯ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಮುಂಬರುವ ಲೋಕಸಭೆ ಚುನಾವಣೆ ತಮಗೆ ಸವಾಲು, ಈ ಬಾರಿ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ನಾನು ಮತ್ತು ಸಹಕಾರ ಮಂತ್ರಿ ರಾಜಣ್ಣ ಹೈಕಮಾಂಡ್ ಗೆ ಮಾತು ಕೊಟ್ಟಿದ್ದೇವೆ. ರಾಹುಲ್ ಗಾಂಧಿಯವರು ಜಿಲ್ಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಸೇರಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು.ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ನಾವೆಲ್ಲರೂ ಒಟ್ಟಾಗಿ ಕುಳಿತು ತೀರ್ಮಾನ ಕೈಗೊಳ್ಳೋಣಾ ಎಂದರು ಎನ್ನಲಾಗಿದೆ.
ಸದ್ಯದಲ್ಲೇ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಬೇಕಾಗುತ್ತದೆ.ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹಿಂದಿನ ಸರ್ಕಾರ ತಮಗೆ ಬೇಕಾದಂತೆ ಮಾಡಿಕೊಂಡಿದೆ ಅದನ್ನು ಕೂಡ ಸರಿ ಪಡಿಸಬೇಕಿದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಆಗಿಂದಾಗ್ಗೆ ಕುಳಿತು ಮಾತನಾಡಬೇಕಿದೆ ಎಂದು ತಿಳಿಸಿರುವುದಾಗಿ ಉನ್ನತ ಮೂಲಗಳು ಹೇಳಿವೆ.
ಈ ವೇಳೆ ಬಹುತೇಕ ಶಾಸಕರು ಅನುದಾನಕ್ಕೆ ಬೇಡಿಕೆಯಿಟ್ಟಿದ್ದಾರೆ.ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ.ಅನೇಕ ಕಡೆ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಅನುದಾನದ ಕೊರತೆಯಿದೆ. ಪಂಚಾಯತ್ ಇಲಾಖೆಗೆ ಅನುದಾನ ಬಿಡುಗಡೆಯಾಗಿಲ್ಲ.ಕೆರೆಗಳ ಹೂಳೆತ್ತುವ ಕಾಮಗಾರಿ, ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಅನುದಾನ ಲಭ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಶಾಸಕರ ಅಭಿಪ್ರಾಯ ಕೇಳಿದ ಮುಖ್ಯಮಂತ್ರಿಗಳು ತುರ್ತು ಹಾಗೂ ಅತ್ಯಗತ್ಯವಾದ ಯೋಜನೆಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡಲಾಗುವುದು. ಸದ್ಯ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗೆ ಹೆಚ್ಚಿನ ಸಂಪನ್ಮೂಲ ತೆಗೆದಿರಿಸಲಾಗಿದೆ.ಹೀಗಾಗಿ ಅನುದಾನದ ಕೊರತೆ ಇದೆ.ಈ ಕೊರತೆ ಪ್ರಸಕ್ತ ಆರ್ಥಿಕ ವರ್ಷಕ್ಕೆ ಮಾತ್ರ ಸೀಮಿತ. ಮುಂದಿನ ವರ್ಷದಿಂದ ಇಂತಹ ಸಮಸ್ಯೆ ಇರುವುದಿಲ್ಲ.ಈ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ.ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದು ತುರ್ತು ಹಾಗೂ ಜರೂರು ಎಂಬ ಕಾಮಗಾರಿಯ ವಿವರ ಕೊಡಿ,ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಬೇಕು.ಅಂತಹ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು ಎಂದು ಗೊತ್ತಾಗಿದೆ.
ಜೊತೆಗೆ ಯಾವುದೇ ಸಮಸ್ಯೆಗಳಿದ್ದರೂ, ಶಾಸಕರು ನೇರವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರನ್ನು ಸಂಪರ್ಕಿಸಬಹುದು. ಒಂದು ವೇಳೆ ಸಚಿವರು ಸ್ಪಂದಿಸದಿದ್ದರೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಿ ಬಹಿರಂಗ ಹೇಳಿಕೆ ನೀಡುವುದು, ಪತ್ರ ಬರೆಯುವಂತಹ ಚಟುವಟಿಕೆಗಳು ಬೇಡ ಎಂದು ಸಭೆಯಲ್ಲಿ ಶಾಸಕರಿಗೆ ತಿಳಿ ಹೇಳಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ