ಮಂಗಳೂರು,ಸೆ.7-ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣ ಪತ್ತೆ ಹಚ್ಚಿರುವ ಅಧಿಕಾರಿಗಳು 55.39 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಸೆ.5 ರಂದು ದುಬೈನಿಂದ ಆಗಮಿಸಿದ ನಾಲ್ವರು ಪ್ರಯಾಣಿಕರು ಪೇಸ್ಟ್ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ್ದಾರೆ. ಎರಡು ಜೊತೆ ಚಪ್ಪಲಿಯಲ್ಲಿ ಮುಚ್ಚಿಟ್ಟಿರುವ ಕಪ್ಪು ಬಣ್ಣದ ಪ್ಯಾಕೆಟ್‌ಗಳು ಮತ್ತು ಪ್ರಯಾಣಿಕರು ಧರಿಸಿರುವ ಡಬಲ್ ಲೇಯರ್ಡ್ ವೆಸ್ಟ್‌ನಲ್ಲಿ (ಬನಿಯನ್) ತುಂಬಾ ತೆಳುವಾಗಿ ಪೇಸ್ಟ್‌ನ ರೂಪದಲ್ಲಿ ಮರೆಮಾಡಿ ಇಟ್ಟಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಂದ ರೂ 45,65,730/- ಮೌಲ್ಯದ ಒಟ್ಟು 897.00 ಗ್ರಾಂ ತೂಕದ 24 ಕ್ಯಾರೆಟ್ ಶುದ್ಧತೆಯ 3 ಆಯತಾಕಾರದ ಚಿನ್ನದ ಬಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಸೆ.6 ರಂದು ಕೇರಳದ ಕಾಸರಗೋಡು ಮೂಲದ ಪ್ರಯಾಣಿಕನಿಂದ ರೂ 9,74,080 ಮೌಲ್ಯದ 190.250 ಗ್ರಾಂ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ಫ್ಲೈಟ್ ಮೂಲಕ ಮಂಗಳೂರಿಗೆ ಆಗಮಿಸಿದ್ದ. ಚಿನ್ನವನ್ನು ಕಾರ್ಟನ್ ಬಾಕ್ಸ್ನಲ್ಲಿ ಅಡಗಿಸಿ ಸಾಗಣೆ ಮಾಡುತ್ತಿರುವುದು ತನಿಖೆ ಮೂಲಕ ತಿಳಿದಿದೆ.