ಬೆಂಗಳೂರು, ಅ.16- ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯದ ವಿದ್ಯುತ್ (Electricity) ಗ್ರಾಹಕರು ದರ ಹೆಚ್ಚಳಗೊಂಡಿದೆ ಎಂದು ಪರಿತಪಿಸುತ್ತಿರುವ ಬೆನ್ನಲ್ಲೇ ಎಸ್ಕಾಂಗಳು ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.
ಗೃಹ ಬಳಕೆ ಸೇರಿದಂತೆ ಎಲ್ಲಾ ರೀತಿಯ ವಿದ್ಯುತ್ ಗ್ರಾಹಕರಿಗೆ ಪ್ರತಿ ಯೂನಿಟ್ ವಿದ್ಯುತ್ ದರ 14 ಪೈಸೆ ಕಡಿಮೆ ಮಾಡಿ ಆದೇಶ ಹೊರಡಿಸಿದೆ.ನೂತನ ದರಗಳು ಅಕ್ಟೋಬರ್ ಒಂದರಿಂದ ಜಾರಿಗೆ ಬರಲಿವೆ.
ಇಂಧನ ಖರೀದಿ ವೆಚ್ಚ ಹೊಂದಾಣಿಕೆ ದರದಲ್ಲಿ ಮೊದಲಿಗಿಂತಲೂ ಶೇ. 14 ಪೈಸೆಯಷ್ಟು ಕಡಿತವಾಗಿದೆ ಎಂದು ತಿಳಿಸಿದೆ.
ಈ ಮೊದಲು ಆಗಸ್ಟ್‌ನಲ್ಲಿ ಪ್ರತಿ ಯುನಿಟ್‍ಗೆ 1ರೂಪಾಯಿ.15 ಪೈಸೆ ಇಂಧನ ಖರೀದಿ ಹೊಂದಾಣಿಕೆ ವೆಚ್ಚ ನಿಗದಿಯಾಗಿತ್ತು.
ಕೆಇಆರ್‌ಸಿ ಆದೇಶದಂತೆ ಸೆಪ್ಟೆಂಬರ್ ನಲ್ಲಿ ಅದನ್ನು ಪರಿಷ್ಕರಣೆ ಮಾಡಿದ್ದು, 14 ಪೈಸೆ ಕಡಿಮೆ ಮಾಡಿದೆ. ಹೀಗಾಗಿ ಪ್ರತಿ ಯುನಿಟ್‍ಗೆ ಪ್ರಸ್ತುತ 1ರೂಪಾಯಿ 1 ಪೈಸೆ ಇಂಧನ ಖರೀದಿ ವೆಚ್ಚ ನಿಗದಿಯಾಗಿದೆ. ಇದರ ಲಾಭವನ್ನು ಎಸ್ಕಾಂಗಳು ಗ್ರಾಹಕರಿಗೆ ತಲುಪಿಸುತ್ತಿವೆ.
ಪ್ರತಿಯೊಂದು ಬಿಲ್‍ನಲ್ಲೂ ಇಂಧನ ಮತ್ತು ವಿದ್ಯುತ್ (Electricity) ಖರೀದಿ ವೆಚ್ಚ ಹೊಂದಾಣಿಕೆ ದರದ ಮೇಲೆ ಶುಲ್ಕ ನಿಗದಿಯಾಗುತ್ತದೆ. ಇದನ್ನು ಗ್ರಾಹಕರಿಂದಲೇ ಸಂಗ್ರಹಿಸಬೇಕೆಂಬುದು ಕೇಂದ್ರ ಸರ್ಕಾರದ ಅಧಿಸೂಚನೆಯಾಗಿದೆ.
ಇತ್ತೀಚೆಗೆ ಕಲ್ಲಿದ್ದಲು ಸಾಗಾಣಿಕೆ ಹಾಗೂ ಇತರ ವೆಚ್ಚಗಳು ತಗ್ಗಿದ್ದರಿಂದಾಗಿ ವಿದ್ಯುತ್ ಖರೀದಿ ದರ ಕಡಿಮೆಯಾಗಿದೆ. ಇದನ್ನು ಪರಿಗಣಿಸಿರುವ ಕೆಇಆರ್ ಸಿ ಹೊಂದಾಣಿಕೆ ದರವನ್ನೂ ಕಡಿಮೆಗೊಳಿಸುವಂತೆ ಆದೇಶಸಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕ ಪರಿಷ್ಕರಣೆಯಾಗುತ್ತದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿಗದಿಯಾಗಿರುವ 1.1 ರೂ.ಗಳ ದರ ಮುಂದಿನ ಜನವರಿಯ ವೇಳೆ ಮತ್ತೊಮ್ಮೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.