ಬೆಂಗಳೂರು,ಅ.5:
ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿರುವ ಎಲ್ಲಾ ಕ್ಷೇತ್ರಗಳ ಶಾಸಕರೊಂದಿಗೆ ತಕ್ಷಣವೇ ನಡೆಸಿ ನವಂಬರ್ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಅರ್ಥ ಫಲಾನುಭವಿಗಳಿಗೆ ಬಗರಾ ಸಾಗುವಳಿ ಚೀಟಿ ವಿತರಿಸುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಂದಾಯ ಇಲಾಖೆಯ ತಹಸೀಲ್ದಾರ್, ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಅವರು,ಬಗರ್ ಹುಕುಂ ಸಾಗುವಳಿ ಚೀಟಿ ವಿತರಿಸುವಂತೆ ಕೋರಿ ರೈತರು ಅರ್ಜಿ ಸಲ್ಲಿಸಿ ವರ್ಷಗಳೆ ಕಳೆದಿವೆ.ಹೀಗಾಗಿ ಈ ವಿಷಯದಲ್ಲಿ ಇನ್ನು ತಡಮಾಡದೆ ಅರ್ಜಿಗಳನ್ನು ವಿಲೆವಾರಿ ಮಾಡುವಂತೆ ಸಲಹೆ ಮಾಡಿದರು.
ಅರಣ್ಯ ಭೂಮಿ ಅಲ್ಲದೇ ಇರುವ ಜಾಗಗಳನ್ನು ಅರ್ಹ ಅರ್ಜಿದಾರರಿಗೆ ಮಂಜೂರು ಮಾಡಲು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೋಧನೆ ನಡೆಸಿ ಮರು ಪೋಡಿ ಮಾಡಲು ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ಸಮಿತಿಯ ಮುಂದೆ ಅರ್ಜಿ ಪರಿಶೀಲನೆಗೆ ಒಳಪಟ್ಟಾಗ ನಕ್ಷೆ, ಪೋಡಿ ಬೇಕು ಎಂದು ಪರದಾಡಬೇಡಿ. ಮುಂಚಿತವಾಗಿಯೇ ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದರು.
ಅರ್ಜಿಗಳನ್ನು ದೀರ್ಘ ಕಾಲದವರೆಗೂ ಬಾಕಿ ಇಡುವುದು ಸರಿಯಲ್ಲ. ಆನ್‌ಲೈನ್ ಸೇವೆಯಡಿ ಕಾಲಮಿತಿಯಲ್ಲೇ ಎಲ್ಲವೂ ಇತ್ಯರ್ಥಗೊಳ್ಳಬೇಕು. ಜನ ಬಂದು ಸಲಾಂ ಹೊಡಿಯಲಿ ಎಂದು ಕಾಯುತ್ತಾ ಕುಳಿತುಕೊಳ್ಳುವುದು ಒಳ್ಳೆಯದಲ್ಲ ಎಂದು ಹೇಳಿದರು.
ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿಗೆ ಸಮಿತಿಗಳ ಸಭೆ ನಡೆಸಬೇಕು. ಶಾಸಕರ ಜೊತೆ ಚರ್ಚಿಸಿ 15 ದಿನಗಳ ಒಳಗಾಗಿ ಸಮಿತಿಗಳಿಗೆ ಸಭೆ ನಡೆಸಿ ಜನರ ಬೇಡಿಕೆ ಹೆಚ್ಚಿರುವುದನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಿ ಎಂದು ಸಲಹೆ ನೀಡಿದರು.
ಪಶು ಮತ್ತು ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಕಾಯ್ದಿರಿಸಿದಷ್ಟು ಭೂಮಿ ಹೊರತುಪಡಿಸಿ ಹೆಚ್ಚುವರಿ ಗೋಮಾಳ ಇದ್ದರೆ ಅದನ್ನು ರೈತ ಫಲಾನುಭವಿಗಳಿಗೆ ಮಂಜೂರು ಮಾಡಬಹುದು ಸಮೀಕ್ಷೆಯ ಪ್ರಕಾರ ಎಷ್ಟು ಜಾನುವಾರುಗಳಿವೆ, ಅವುಗಳಿಗೆ ಎಷ್ಟು ಜಮೀನು ಅಗತ್ಯವಿದೆ ಎಂದು ನಿಗದಿಯಾಗಿದ್ದು, ಅದಕ್ಕಿಂತಲೂ ಹೆಚ್ಚುವರಿ ಭೂಮಿ ಇದ್ದರೆ ಅದನ್ನು ಜಿಲ್ಲಾಧಿಕಾರಿಗಳಿಂದ ಗುರುತಿಸಿ ರೈತರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದರು.
ಗೋಮಾಳ ಎಂಬ ಕಾರಣಕ್ಕೆ ರೈತರ ಅರ್ಜಿಗಳನ್ನು ತಿರಸ್ಕಾರ ಮಾಡಬಾರದು. ಈ ರೀತಿ ಮಾಡಿದರೆ ನ್ಯಾಯಾಲಯದಲ್ಲಿ ನಾವು ಕಷ್ಟ ಎದುರಿಸಬೇಕಾಗುತ್ತದೆ. ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ತಮಲ್ಲಿರುವ ಜಾನುವಾರುಗಳ ಸಂಖ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡು ಭೂಮಿ ಲಭ್ಯತೆಯನ್ನು ಗುರುತಿಸಬೇಕು ಎಂದು ಹೇಳಿದರು
Previous Articleಹೈ ಕೋರ್ಟ್ ಕಾರ್ಯ ಕಲಾಪಗಳಿಗೆ ದಸರಾ ರಜೆ
Next Article ಬಿಗ್ ಬಾಸ್ ಫೇಕ್ ಲಾಯರ್, ಚಾನಲ್ ವಿರುದ್ಧ ವಕೀಲರ ಸಂಘ ನೋಟಿಸ್