ಬೆಂಗಳೂರು,
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹಿಂದಿ ಸೇರಿದಂತೆ ಎಲ್ಲಾ ತೃತೀಯ ಭಾಷೆಗೆ ಅಂಕಗಳನ್ನು ನೀಡದೆ ಕೇವಲ ಗ್ರೇಡ್ ನೀಡುವ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿರುವ ರಾಜ್ಯಪಾಲ ತಾವರ ಚೆಂದ್ ಗೆಹ್ಲೋಟ್ ಅವರ ನಡೆಗೆ ಕರ್ನಾಟಕ ರಕ್ಷಣಾ ವೇದಿಕೆ ಕೆಂಡ ಕಾರಿದೆ.
ರಾಜ್ಯ ಸರ್ಕಾರ ತನ್ನ ನಿರ್ಧಾರ ವನ್ನು ಮರು ಪರಿಶೀಲಿಸಿ. ಭಾಷಾವೈವಿಧ್ಯತೆ, ಜಾಗೃತಿ, ಬೌದ್ಧಿಕ ಬೆಳವಣಿಗೆಯನ್ನು ಬೆಳೆಸುವಲ್ಲಿ ತೃತೀಯ ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಗ್ರೇಡ್ ನೀಡಿದರೆ ಶೈಕ್ಷಣಿಕ ಪ್ರಾಮುಖ್ಯತೆ ಕಡಿಮೆ ಮಾಡಬಹುದು ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವುದನ್ನು ವೇದಿಕೆ ಅಧ್ಯಕ್ಷ ನಾರಾಯಣಗೌಡ ಬಲವಾಗಿ ಖಂಡಿಸಿದ್ದಾರೆ.
ರಾಜ್ಯಪಾಲರೇ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಲ್ಲಿ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ, ನಿಮಗೆ ಆ ಅಧಿಕಾರವನ್ನು ಕರ್ನಾಟಕದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆಯಾಗಿದ್ದರೆ ಕೇಳಿ, ವ್ಯವಸ್ಥೆ ಮಾಡಿಕೊಡೋಣ. ಬೇರೆ ಉಸಾಬರಿಯನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ನೀವು ಹೇಳಿದ್ದೀರಿ. ನಿಮ್ಮ ಈ ಪತ್ರ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ” ಎಂದಿದ್ದಾರೆ.
“ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ” ಎಂದು ಹೇಳಿದ್ದಾರೆ.
“ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ʻಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘʻದವರು ನಿಮಗೆ ಕೊಟ್ಟಿದ್ದಾರೆ ಎನ್ನಲಾದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದನ್ನು ಕೇಳಿ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯ ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂಥ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವೂ ಕಾಯುತ್ತಿದ್ದೇವೆ” ಎಂದು ವಿವರಿಸಿದ್ದಾರೆ.
“ರಾಜ್ಯಪಾಲರ ಹುದ್ದೆ ಎಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ನುಸುಳಿಕೊಂಡಿರುವ ರಾಜಶಾಹಿ ವ್ಯವಸ್ಥೆಯ ಒಂದು ಪಳೆಯುಳಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಇನ್ಯಾರೋ ಇಲ್ಲಿ ರಾಜರಂತೆ ಮೆರೆಯುವುದು ಸಾಧ್ಯವಿಲ್ಲ. ನಿಮ್ಮ ಈ ಅಧಿಕಪ್ರಸಂಗದ ಪತ್ರ ರಾಜ್ಯಪಾಲರ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಂತಾಗಿದೆ” ಎಂದಿದ್ದಾರೆ.
ಜನರಿಂದ ಆಯ್ಕೆಯಾದ ಸರ್ಕಾರದ ದೈನಂದಿನ ಆಡಳಿತದ ತೀರ್ಮಾನದ ಕುರಿತು ಪತ್ರ ಬರೆಯಲು ನಿಮಗೆ ಯಾವುದೇ ಹಕ್ಕಿಲ್ಲ. ಒಂದು ವೇಳೆ ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರವನ್ನು ಬರೆದಿದ್ದರೆ, ಮೊದಲು ಉತ್ತರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ

