ಬೆಂಗಳೂರು, ಅ. 21- ರಾಜ್ಯ ಸರ್ಕಾರದ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ (Shakti Scheme) ರಾಜ್ಯದಾದ್ಯಂತ ಅಪಾರ ಸ್ಪಂದನೆ ಮತ್ತು ಸಾರ್ವಜನಿಕರ ಮೆಚ್ಚುಗೆ ವ್ಯಕ್ತ ಆಗಿರುವ ಹಿನ್ನೆಲೆಯಲ್ಲಿ 5675 ಹೊಸ ಬಸ್ ಖರೀದಿಯ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಸಾರಿಗೆ ಇಲಾಖೆಯ ರಾಜಸ್ವ ಗುರಿ ಸಂಗ್ರಹ ಹಾಗೂ ಸಾರಿಗೆ ನಿಗಮಗಳ ಹಣಕಾಸು ನಿರ್ವಹಣೆ ಕುರಿತಂತೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಬಸ್ಸುಗಳು ಖರೀದಿ ಕುರಿತು ಶೀಘ್ರವೇ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.
ಶಕ್ತಿ ಯೋಜನೆಯಿಂದ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವರ ಸಂಖ್ಯೆ ಹೆಚ್ಚಿದ್ದು, ಬಸ್ಸುಗಳಿಗೆ ಬೇಡಿಕೆ ಹೆಚ್ಚಾಗಿದೆ.ಹೀಗಾಗಿ ಪ್ರಸಕ್ತ ಆಯವ್ಯಯದಲ್ಲಿ ಹೊಸ ಬಸ್‌ಗಳ ಖರೀದಿಗೆ 500 ಕೋಟಿ ರೂ. ಒದಗಿಸಲಾಗಿದ್ದು, ಖರೀದಿ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಿದರು.
ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಪ್ರಯಾಣಿಕರ ಸಂಖ್ಯೆ ಶೇ. 15 ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಹೆಚ್ಚುವರಿ ಶೆಡ್ಯೂಲ್ ಗಳನ್ನು ಸೇರಿಸಲು ಅನುವಾಗುವಂತೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಅನುವಾಗುವಂತೆ ಬಸ್‌ಗಳನ್ನು ಸೇರ್ಪಡೆಗೊಳಿಸುವಂತೆ ತಿಳಿಸಿದರು.
ಶಕ್ತಿ ಯೋಜನೆ ಮತ್ತು ಇಲಾಖೆಯಲ್ಲಿ ಕೈಗೊಂಡ ಹಲವು ಪರಿಣಾಮಕಾರಿ ಯೋಜನೆಗಳಿಂದ ನಿಗಧಿತ ಗುರಿ ದಾಟಿ ರಾಜಸ್ವ ಸಂಗ್ರಹವಾಗುತ್ತಿದೆ.ವಾಹನ ತನಿಖೆಯಿಂದ 83 ಕೋಟಿ ರೂ. ದಂಡ ಸಂಗ್ರಹ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.