ಬೆಂಗಳೂರು,ಮಾ.16- ರಾಜ್ಯ ಸರ್ಕಾರಿ ನೌಕರರ ಸಂಬಳ ಸುಮಾರು ಶೇ.27.5ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದಕ್ಕಾಗಿ ವಾರ್ಷಿಕ ಸುಮಾರು 13 ಸಾವಿರ ಕೋಟಿ ರೂಪಾಯಿ ವೆಚ್ಚವಾಗುವ ಅಂದಾಜಿದ್ದು,ಪ್ರಸಕ್ತ ಬಜೆಟ್ ನಲ್ಲಿ ಈ ಮೊತ್ತ ಕಾಯ್ದಿರಿಸಲಾಗಿದೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಲಾಗಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದ 7ನೇ ರಾಜ್ಯ ವೇತನ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ
ವರದಿ ಸಲ್ಲಿಸಿದರು.
ಈ ಆಯೋಗ ಶೇ.27.5ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸ್ಸು ಮಾಡಿದೆ.ಈ ಮೂಲಕ ನೌಕರರ ಮೂಲವೇತನವನ್ನು 17,000 ರೂಪಾಯಿ ಗಳಿಂದ 27,000 ರೂಪಾಯಿಗಳಿಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ
ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 7ನೇ ವೇತನ ಆಯೊಗದ ವರದಿಯಲ್ಲಿ ಹಲವಾರು ಶಿಫಾರಸ್ಸುಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಸರ್ಕಾರಿ ನೌಕರರ ವೇತನವನ್ನು ಶೇ.27.5ರಷ್ಟು ಹೆಚ್ಚಿಸಬೇಕು ಎಂಬುದು ಸೇರಿದೆ. ಆಯೋಗದ ಶಿಫಾರಸ್ಸನ್ನು ಆರ್ಥಿಕ ಇಲಾಖೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸಲಹೆ ನೀಡಲಿದೆ. ಆ ಬಳಿಕ ವರದಿ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಮಾತನಾಡಿ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇ.27.5ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಿದರು
ಈಗಾಗಲೇ ಜಾರಿಯಲ್ಲಿರುವ ಶೇ.17ರಷ್ಟು ವೇತನ ಪರಿಷ್ಕರಣೆ ಅಂತಿಮ ವರದಿ ಜಾರಿಯಾದ ಬಳಿಕ ಸ್ಥಗಿತಗೊಳ್ಳಲಿದೆ. ಒಟ್ಟಾರೆ. 27.5ರ ಒಳಗಿನ ಪ್ರಮಾಣದಲ್ಲಿ ಸರ್ಕಾರ ವೇತನ ಪರಿಷ್ಕರಣೆ ಮಾಡಬಹುದು ಎಂದು ತಿಳಿಸಿದರು.
ನೌಕರರಿಗೆ ಈಗಾಗಲೇ ಶೇ.31ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಿದೆ. 2017-18ರಲ್ಲಿ ಮೂಲ ವೇತನ 17 ಸಾವಿರ ರೂ.ಗಳಷ್ಟಾಗಿದ್ದು, ಈ ಎಲ್ಲ ಆರ್ಥಿಕ ಅನುಕೂಲಗಳನ್ನು ಒಳಗೊಂಡು 27 ಸಾವಿರ ರೂಪಾಯಿಗಳಿಗೆ ಹೆಚ್ಚಾಗಬಹುದು ಎಂದು ವಿವರಿಸಿದರು.
ಶೇ.27.5ರಷ್ಟು ವೇತನ ಪರಿಷ್ಕರಣೆಯನ್ನು 2022ರ ಜುಲೈ 1ರಿಂದ ಪೂರ್ವಾನ್ವಯಗೊಳಿಸುವಂತೆ ಅಂತಿಮ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.ಆಯೋಗದ ಶಿಫಾರಸ್ಸನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತಂದರೆ 2024-25ನೇ ಸಾಲಿಗೆ 17,447 ಕೋಟಿ ರೂ.ಗಳ ಆರ್ಥಿಕ ಹೊರೆಯಾಗಲಿದೆ ಎಂದು ಹೇಳಿದರು.
ಎಚ್‍ಆರ್‍ಎ ಸೇರಿದಂತೆ ಇತರೆ ಆರ್ಥಿಕ ಸೌಲಭ್ಯಗಳನ್ನು ಹೆಚ್ಚಿಸಲು ಸಲಹೆ ನೀಡಲಾಗಿದೆ. ಜೊತೆಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರದ ಮಾದರಿಯಂತೆ ಪ್ರತಿ 5 ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಿ ವೇತನ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರದ ಮಾರ್ಗಸೂಚಿಗಳನ್ನೇ ಪಾಲನೆ ಮಾಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವಿನ ತಾರತಮ್ಯ ತಗ್ಗಲಿದೆ. ಕೇಂದ್ರ ಸರ್ಕಾರಿ ವೇತನ ಆಯೋಗಕ್ಕೆ ಸರಿಸಮನಾಗಿ ರಾಜ್ಯ ಸರ್ಕಾರದ ಆಯೋಗಗಳು ಅಸ್ತಿತ್ವಕ್ಕೆ ಬರಲಿದೆ ಎಂದು ವಿವರಿಸಿದರು.