ಬೆಂಗಳೂರು, ಮಾ.7- ನಾಗರಿಕ ಸಮಾಜಕ್ಕೆ ಶಾಪವಾಗಿ ಕಾಡುತ್ತಿರುವ ಆ್ಯಸಿಡ್ (Acid) ದಾಳಿ ತಡೆಗಟ್ಟುವ ದೃಷ್ಟಿಯಿಂದ ರಾಜ್ಯ ಸರ್ಕಾರ ಇದೀಗ ರಾಜ್ಯದಲ್ಲಿ ಆ್ಯಸಿಡ್ ಮಾರಾಟ ನಿಷೇಧಿಸುವ ಕುರಿತಂತೆ ಚಿಂತನೆ ನಡೆಸಿದೆ.
ಚಿನ್ನಾಭರಣ ತಯಾರಿಕೆ ಸೇರಿದಂತೆ ಕೆಲವೊಂದು ನಿರ್ದಿಷ್ಟ ಉದ್ದೇಶ ಹೊರತುಪಡಿಸಿ ಇತರೆ ಯಾವುದೇ ಉದ್ದೇಶಗಳಿಗೆ ಆ್ಯಸಿಡ್ ಬಳಸದಂತೆ ನಿಷೇಧ ವಿಧಿಸಲು ಸರ್ಕಾರ ನಿಯಮಾವಳಿಗಳಲ್ಲಿ ಮಾರ್ಪಾಡು ಮಾಡಲು ತೀರ್ಮಾನಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ಪಿಯು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವ ಆ್ಯಸಿಡ್ ಸುಲಭವಾಗಿ ದೊರೆಯುವುದರಿಂದ ಇದು ದುರ್ಬಳಕೆಯಾಗುತ್ತಿದೆ. ದುಷ್ಕರ್ಮಿಗಳ ಕೈಗೆ ಇದೊಂದು ಪ್ರಬಲ ಅಸ್ತ್ರವಾಗಿ ಸಿಗತೊಡಗಿದೆ ಹೀಗಾಗಿ ಇದರ ಮಾರಾಟ ಮತ್ತು ಸಾಗಾಣಿಕೆ ಮೇಲೆ ನಿರ್ಬಂಧ ವಿಧಿಸುವ ನಿಯಮ ರೂಪಿಸುವ ಕುರಿತಂತೆ ಚರ್ಚೆಗಳು ನಡೆದಿವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಕೈಗಾರಿಕೆ ಉದ್ದೇಶ ಹೊರತುಪಡಿಸಿ ಆಕ್ಸಿಡನ್ನು ದುರ್ಬಳಕೆ ಮಾಡುವ ಪ್ರಸಂಗಗಳೇ ಹೆಚ್ಚಾಗಿವೆ, ದುಷ್ಕರ್ಮಿಗಳು ಇದನ್ನು ಬಳಸುತ್ತಿರುವುದರಿಂದ
ಅದರ ಲಭ್ಯತೆ ಮತ್ತು ಖರೀದಿಯ ಸಂಬಂಧ ನಿರ್ಬಂಧಗಳನ್ನು ಹಾಕುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ‘ಮಹಿಳೆಯರ ಮೇಲಿನ ದೌರ್ಜನ್ಯ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಅವರು ವಿವಿಧ ಮಹಿಳಾ ಸಂಘಟನೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಲಹೆಗಳನ್ನು ಆಲಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅವರ ಮೇಲೆ ದೌರ್ಜನ್ಯ ನಡೆದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರು ಮತ್ತು ಮಕ್ಕಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ, ವಿಧಾನಸೌಧದ ಕಾರ್ಯಾಲಯ ಅಥವಾ ಗೃಹ ಕಚೇರಿಗೆ ಆಗಮಿಸಿ ನನ್ನನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದರು.
ಕಡಬದಲ್ಲಿ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಸರ್ಕಾರ ಈಗಾಗಲೇ 4 ಲಕ್ಷ ರೂ. ಪರಿಹಾರ ಘೋಷಿಸಿದೆ. ಅವರಿಗೆ ಪ್ಲಾಸ್ಟಿಕ್ ಸರ್ಜರಿ ಅವಶ್ಯವಿದ್ದರೆ 20 ಲಕ್ಷದವರೆಗೂ ಖರ್ಚನ್ನು ಭರಿಸಲು ಮುಂದಾಗಿದೆ. ಜೊತೆಗೆ ಸಂತ್ರಸ್ತರಿಗೆ ನಿವೇಶನವನ್ನು ಕೂಡಾ ನೀಡಲಾಗುವುದು ಎಂದು ತಿಳಿಸಿದರು.
ಮಹಿಳೆಯರಿಗೆ ಗೌರವ:
ಪೊಲೀಸರು ಕೂಡಾ ಮಹಿಳೆಯರ ಸಮಸ್ಯೆ ಗಳ ವಿಚಾರದಲ್ಲಿ ಹೆಚ್ಚು ಕಾಳಜಿಯಿಂದ ಕ್ರಮ ವಹಿಸಬೇಕು,ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಮಹಿಳೆಯರು ತಮ್ಮ ಸಮಸ್ಯೆಗಳ ಕುರಿತು ದೂರು ನೀಡಲು ಠಾಣೆಗೆ ಬಂದರೆ ಕೂಡಲೆ ಸಮಸ್ಯೆಗಳನ್ನು ಆಲಿಸಿ ನಮ್ಮ ಬೆನ್ನಿಗೆ ಪೊಲೀಸರು ಇದ್ದಾರೆ ಎಂಬ ಧೈರ್ಯ ಅವರಲ್ಲಿ ಮೂಡಬೇಕು ಎಂದರು.
ಮಹಿಳೆಯರು ಧೈರ್ಯವಾಗಿದ್ದರೆ ಒಳ್ಳೆ ಆಡಳಿತ, ಜನಸ್ನೇಹಿ ಪೊಲೀಸ್ ಎನಿಸಿಕೊಳ್ಳಲು ಸಾಧ್ಯ.ಈ ಹಿಂದೆ ಪೊಲೀಸ್ ಸಹಾಯವಾಣಿ ಮೂಲಕ ಬಂದ ದೂರುಗಳನ್ನು ಆಧರಿಸಿ, ಹೋಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಲು 20 ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರಸ್ತುತ 7 ನಿಮಿಷದೊಳಗೆ ಸ್ಥಳದಲ್ಲಿ ಹಾಜರಿರುತ್ತಾರೆ. ನಗರದಲ್ಲಿ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರು ನಿರಂತರ ಕಣ್ಗಾವಲು ಇಟ್ಟಿರುತ್ತಾರೆ ಎಂದು ಹೇಳಿದರು.
ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಪ್ರಮಾಣ ಹೆಚ್ಚಬೇಕು,ಈಗಿರುವ ಪೊಲೀಸ್ ಸಿಬ್ಬಂದಿಗಳಲ್ಲಿ ಶೇ.8ರಷ್ಟು ಮಹಿಳೆಯರಿದ್ದಾರೆ. ಶೇ.25ರಷ್ಟಾಗಬೇಕು ಎಂಬ ಗುರಿ ಹೊಂದಲಾಗಿದೆ. ಮಹಿಳಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ಜಿ. ಪರಮೇಶ್ವರ್ ತಿಳಿಸಿದರು.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಿಸಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮಹಿಳೆಯರ ಬಗ್ಗೆ ಅವಹೇಳನ ಮಾಡುವುದು, ಅವಾಚ್ಯ ಮಾತುಗಳನ್ನು ಹಾಗೂ ತಿರುಚಿದ ವೀಡಿಯೋಗಳನ್ನು ಪ್ರಕಟಿಸುವರ ವಿರುದ್ಧ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದರು.