ಮೈಸೂರು.
ರಾಜ್ಯದಲ್ಲಿನ ಕೆಲವು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಪೈಕಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರವೂ (Chamundeshwari Assembly Constituency, Mysore) ಒಂದು. ಚಾಮುಂಡೇಶ್ವರಿ ಕ್ಷೇತ್ರ ರಾಜ್ಯದ ಪ್ರಭಾವಿ ರಾಜಕಾರಣಿ, ಮಾಜಿ ಸಿಎಂ ಹಾಗೂ ಹಾಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ರಾಜಕೀಯ ಕರ್ಮಭೂಮಿ. ಅವರಿಗೆ ರಾಜಕೀಯ ಶಕ್ತಿ ನೀಡಿದ ಚುನಾವಣಾ ಅಖಾಡ. ಇಲ್ಲಿಯವರೆಗೆ ನಡೆದ 13 Electionಗಳ ಪೈಕಿ ಸಿದ್ದರಾಮಯ್ಯ ಈ ಕ್ಷೇತ್ರದಿಂದ 5 ಬಾರಿ ಜಯ ಕಂಡಿದ್ದರು. JDS ನಿಂದ ಹೊರಬಂದ ಬಳಿಕ ನಡೆದ 2006ರ ಉಪಚುನಾವಣೆಯಲ್ಲೂ ಇದೇ ಕ್ಷೇತ್ರದಿಂದ Congress ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 257 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯವಾಗಿ ಮರುಜನ್ಮ ಪಡೆದದ್ದು ಇತಿಹಾಸ.
ಆದರೆ, ಸುದೀರ್ಘ ಕಾಲ ಕೈಹಿಡಿದಿದ್ದ ಈ ಕ್ಷೇತ್ರ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕೈಬಿಟ್ಟಿತು. ಒಂದು ಕಾಲದ ಆಪ್ತ ಸ್ನೇಹಿತರಾಗಿದ್ದ ಜಿ.ಟಿ.ದೇವೇಗೌಡ (G T Devegowda ), ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿದರು. ಇದೇ ಕಾರಣದಿಂದ GTD ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದು ಪ್ರಸಿದ್ಧರಾದರು. ಕಳೆದ ಬಾರಿ ಮುಖ್ಯಮಂತ್ರಿಯನ್ನೇ ಪರಾಭವಗೊಳಿಸಿ, ರಾಜ್ಯದ ಗಮನ ಸೆಳೆದಿದ್ದ ಜಿ.ಟಿ.ದೇವೇಗೌಡ ಅವರು ಮತ್ತೆ ಇಲ್ಲಿ JDS ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚುನಾವಣೆಗೂ ಮುನ್ನ ಜಿ.ಟಿ.ದೇವೇಗೌಡ ಅವರನ್ನು ತಮ್ಮತ್ತ ಸೆಳೆಯಲು Congress, BJP ಸಾಕಷ್ಟು ಬೆವರು ಹರಿಸಿದ್ದವು.
ವಿಧಾನಸಭೆಗೆ ಸ್ಪರ್ಧಿಸಲು ತಮ್ಮ ಪುತ್ರನಿಗೆ ಟಿಕೆಟ್ ಸೇರಿದಂತೆ ಹಲವು ವಿಷಯದಲ್ಲಿ JDS ಜೊತೆ ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ GTD ಒಂದು ಹಂತದಲ್ಲಿ ಪಕ್ಷದಿಂದ ತಮ್ಮ ಕಾಲುಗಳನ್ನು ಹೊರಗಿಟ್ಟಿದ್ದರು. ತಮ್ಮ ಒಂದು ಕಾಲದ ರಾಜಕೀಯ ಗುರು, ಸ್ನೇಹಿತರಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದ GTD ಇನ್ನೇನು ಕಾಂಗ್ರೆಸ್ ಸೇರಿದರು ಎನ್ನುವಾಗ JDS ಪರಮೋಚ್ಚ ನಾಯಕ ದೇವೇಗೌಡ (H.D. Deve Gowda) ರಂಗಪ್ರವೇಶ ಮಾಡಿ ಬಿಕ್ಕಟ್ಟು ಶಮನಗೊಳಿಸಿದ್ದರು. ಇದೀಗ ತಮ್ಮ ಪುತ್ರನಿಗೂ JDS ಟಿಕೆಟ್ ಖಾತ್ರಿಮಾಡಿಕೊಂಡ GTD ಚಾಮುಂಡೇಶ್ವರಿ ಕ್ಷೇತ್ರದ JDS ಹುರಿಯಾಳು.
ಇವರನ್ನು ಈ ಬಾರಿ ಸೋಲಿಸಲೇಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಪಣ ತೊಟ್ಟಿವೆ. ಅದರಂತೆ, ಉಭಯ ಪಕ್ಷಗಳೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿಯ ಪೈಪೋಟಿ ಎದುರಾಗಲಿದೆ. ಇದೀಗ ಹ್ಯಾಟ್ರಿಕ್ ಜಯದ ಕನಸಿನೊಂದಿಗೆ ಜಿ.ಟಿ.ದೇವೇಗೌಡ ಮುಂದಿನ ಚುನಾವಣೆ ಎದುರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿಯ ಚುನಾವಣೆ ಅವರಿಗೆ ಅಗ್ನಿಪರೀಕ್ಷೆಯೇ ಸರಿ. ಯಾಕೆಂದರೆ ಜೆಡಿಎಸ್ ತೊರೆಯುವುದಾಗಿ ಹೇಳಿ, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜೊತೆ ಪಕ್ಷ ಸೇರ್ಪಡೆ ಮಾತುಕತೆ ನಡೆಸಿದ್ದ ಜಿಟಿಡಿ ಇದೀಗ ಜೆಡಿಎಸ್ ನಲ್ಲೇ ಉಳಿದಿರುವ ಅವರ ನಿಲುವು ಉಭಯ ಪಕ್ಷಗಳಿಗೂ ಸಿಟ್ಟು ತರಿಸಿದ್ದು, ಅದೇ ಕಾರಣದಿಂದ ಈ ಬಾರಿ ಹೇಗಾದರೂ ಮಾಡಿ GTD ಸೋಲಿಸಬೇಕೆಂಬ ಹಠಕ್ಕೆ ಬಿದ್ದಿವೆ. ಆದರೆ, GTD ಸೋಲಿಸುವಂತಹ ಪ್ರಬಲ ಅಭ್ಯರ್ಥಿಗಳು ಸದ್ಯಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಕಾಣುತ್ತಿಲ್ಲ. ಆಕಾಂಕ್ಷಿಗಳ ಪೈಕಿ ವೈಯಕ್ತಿಕ ವರ್ಚಸ್ಸು, ಜನಬೆಂಬಲ ಹೊಂದಿರುವವರು ಯಾರೂ ಇಲ್ಲ. ಆದ್ದರಿಂದ ಉಭಯ ಪಕ್ಷಗಳಲ್ಲೂ ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆದಿದ್ದು, ಅವರು ಯಾರಾಗಬಹುದು ಎಂಬುದು ಸದ್ಯಕ್ಕೆ ಕೌತುಕ.
ಕ್ಷೇತ್ರದ ಮೇಲೆ ಬಲವಾದ ಹಿಡಿತ ಹೊಂದಿರುವ GTD ಜನಾನುರಾಗಿ, ಕ್ಷೇತ್ರದ ಮತದಾರರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವ ಅವರ ಗುಣ ಎದುರಾಳಿಗಳನ್ನು ಇಲ್ಲದಂತೆ ಮಾಡಿದೆ. ಹೀಗಾಗಿಯೇ ಇವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನ ಮಾಡಿದ್ದು. ಸದ್ಯ ಜಿ.ಟಿ.ದೇವೇಗೌಡರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಆದ್ದರಿಂದ ಸಿನಿಮಾ ನಟರನ್ನು ಕರೆತರುವ ಕುರಿತು ಚಿಂತನೆ ನಡೆದಿದೆ.
ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಮಾಜಿ ಸಂಸದ ಹಾಗೂ ನಟ ಶಶಿಕುಮಾರ್ (Shashi Kumar) ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಾಲ್ಮೀಕಿ ಸಮುದಾಯದ ಮತದಾರರಿದ್ದಾರೆ. ಹಾಗೆಯೇ ಲಿಂಗಾಯತರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದು ಶಶಿಕುಮಾರ್ ಕಣಕ್ಕಿಳಿದರೆ GTD ಅವರನ್ನು ಮಣಿಸಬಹುದೆನ್ನುವುದು ಕಮಲ ಪಾಳಯದ ಲೆಕ್ಕಾಚಾರ. ಕಾಂಗ್ರೆಸ್ ನಲ್ಲಂತೂ ಸ್ಪರ್ಧೆಗೆ ದೊಡ್ಡ ಪೈಪೋಟಿಯೇ ಇದೆ. ಟಿಕೆಟ್ ಬಯಸಿ 8 ಆಕಾಂಕ್ಷಿಗಳು KPCC ಗೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಮಾಜಿ ಶಾಸಕ ಸತ್ಯನಾರಾಯಣ ಅವರ ಪುತ್ರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅರುಣ್ ಕುಮಾರ್, ಜಿಪಂ ಮಾಜಿ ಸದಸ್ಯರಾದ ಕೂರ್ಗಳ್ಳಿ ಮಹದೇವ, ಲೇಖಾ ವೆಂಕಟೇಶ್, ಮುಖಂಡ ರಾಕೇಶ್ ಪಾಪಣ್ಣ, ಸ್ಟೀಲ್ ಉದ್ಯಮಿ ಕೃಷ್ಣಕುಮಾರ್ ಸಾಗರ್ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ನಿರ್ದೇಶಕ ಮಲ್ಲಹಳ್ಳಿ ಮಹದೇವಸ್ವಾಮಿ ಕೈ ಟಿಕೆಟ್ ಕೋರಿದ್ದಾರೆ.
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಜಿ.ಟಿ.ದೇವೇಗೌಡ ಗೆಲ್ಲುವ ಕುದುರೆ. ಇದರ ನಾಗಾಲೋಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಸಾಧ್ಯವೇ ಎನ್ನುವುದಷ್ಟೇ ಪ್ರಶ್ನೆ.