ಬೆಂಗಳೂರು, ಡಿ.29- ಸೇವೆ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಭಾಗಶಃ ಸಮ್ಮತಿಸಿದೆ.
ಕಾನೂನಿನ ತೊಡಕಿರುವ ಕಾರಣ ಇವರ ಸೇವೆ ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅತಿಥಿ ಉಪನ್ಯಾಸಕರ ಗೌರವಧನವನ್ನು ಐದು ಸಾವಿರ ರೂ. ಹೆಚ್ಚಳ ಮಾಡಲಾಗುವುದು.ಇವರಿಗೆ 60 ವರ್ಷ ತುಂಬಿದವರಿಗೆ ಇಡುಗಂಟು ನೀಡಲು ಹಾಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಗೌರವಧನವನ್ನು ಗರಿಷ್ಠ 32 ಸಾವಿರ ರೂ.ಗೆ ಗರಿಷ್ಠ 5 ಸಾವಿರ ರೂ. ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದಾರೆ. ಇದಕ್ಕೆ 55 ಕೋಟಿ ರೂ. ವರ್ಷಕ್ಕೆ ಹೊರೆಯಾಗಲಿದೆ ಎಂದರು.
ವರ್ಷಕ್ಕೆ 50 ಸಾವಿರ ರೂ.ನಂತೆ 10 ವರ್ಷಕ್ಕೆ ಗರಿಷ್ಠ 5 ಲಕ್ಷ ರೂ. ಕೊಡೋಕೆ ತೀರ್ಮಾನ ಮಾಡಿದ್ದೇವೆ. 60 ವರ್ಷ ಪೂರೈಸಿದವರಿಗೆ ಮಾತ್ರ ನಾವು ಇಡುಗಂಟು ಕೊಡೋದು, ಮಧ್ಯದಲ್ಲಿ ಬಿಟ್ಟವರಿಗೆ ಸಿಗುವುದಿಲ್ಲ.ಆರೋಗ್ಯ ವಿಮೆ ಮಾಡಿದ್ದೇವೆ. ಸೇವಾ ಭದ್ರತೆ ಬಗ್ಗೆಯು ಚಿಂತನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ವಾರಕ್ಕೆ 15 ಗಂಟೆ ಕೆಲಸ ಮಾಡುವವರಿಗೆ ತಿಂಗಳಿಗೆ ಒಂದು ರಜೆ ಕೊಡಲು ತೀರ್ಮಾನ ಮಾಡಲಾಗಿದೆ. 2,800 ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಉಪನ್ಯಾಸಕರಿಗೂ ಇದು ಅನ್ವಯಿಸುತ್ತದೆ. ಅತಿಥಿ ಉಪನ್ಯಾಸಕರಿಗೆ ಗೌರವ ಕೊಡುತ್ತಿಲ್ಲ ಎಂಬುದನ್ನು ಗಂಭೀರವಾಗಿ ತೆಗೆದುಕೊಂಡು ಪ್ರಾಂಶುಪಾಲರಿಗೆ ಹೇಳಿದ್ದೇವೆ. ಅವರಿಗೆ ಗೌರವ ಕೊಡಬೇಕು, ನ್ಯಾಯಯುತವಾಗಿ ನೋಡಿಕೊಳ್ಳಬೇಕುಎಂಬ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಪ್ರತಿ ವರ್ಷ ಕೌನ್ಸಿಲಿಂಗ್ ಮೂಲಕ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಲಾಗುವುದು. ಸೇವೆಯ ಮತ್ತು ಅಂಕಗಳ ಆಧಾರದಲ್ಲಿ 16 ವರ್ಷ ಸೇವೆ ಮಾಡಿದವರಿಗೆ ಡಾಕ್ಯುಮೆಂಟ್ ಡೇಟಾ ಮಾಡಿಕೊಂಡು ದಾಖಲಾತಿ ಮಾಡಿಕೊಳ್ಳಲು ಸರಳ ಪ್ರಕ್ರಿಯೆ ಮಾಡುತ್ತೇವೆ. ಹೊಸ ನೇಮಕಾತಿ ಸಂದರ್ಭದಲ್ಲಿ ಕೃಪಾಂಕದ ಆಧಾರದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಮಾಡಿರುವವರಿಗೆ ವರ್ಷಕ್ಕೆ ಒಂದು ಪರ್ಸೆಂಟ್‍ನಂತೆ ಕೃಪಾಂಕ ಕೊಡುತ್ತೇವೆ. ಒಟ್ಟು 15 ಅಂಕಗಳು ಸಿಗುತ್ತವೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಮಾತ್ರ ಕೃಪಾಂಕ ಸಿಗಲಿದೆ ಎಂದು ಅವರು ವಿವರಿಸಿದರು.
ವಿಮೆಗೆ 5 ಕೋಟಿ ರೂ. ಹೊರೆಯಾಗಲಿದೆ. ಇಡುಗಂಟಿಗೆ 72 ಕೋಟಿ ಹೊರೆ ಆಗುವುದು. ಅವರ ಸೇವೆ ಪರಿಗಣಿಸಿ ನಮ್ಮ ಎಲ್ಲಾ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನಾವು ಕ್ರಮ ವಹಿಸಿದ್ದೇವೆ. ಒಂದು ತಿಂಗಳು ಸಮಯ ಹಾಳಾಗಿದೆ ಜನವರಿ ಒಂದರಿಂದ ಕೆಲಸಕ್ಕೆ ಹಾಜರಾಗಲು ಹೇಳಿದ್ದೇವೆ. ಅವರು ಸಹಕರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದೇವೆ ಎಂದರು